ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಕಥೆ, ಕವನ, ಕಾದಂಬರಿಗಳಿಗಿಂತ ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ ಹೆಚ್ಚು ಬೆಳೆಯುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅಭಿಪ್ರಾಯಪಟ್ಟರು.ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಭಾನುವಾರ ಅರಿಹಂತ ಸೌಹಾರ್ದ ಸಹಕಾರಿ ಸಂಘದ ಬೆಳ್ಳಿ ಹಬ್ಬದ ವರ್ಷಾಚರಣೆ ನಿಮಿತ್ತ ಕಸಾಪ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಏರ್ಪಡಿಸಿದ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದ್ದು, ಕನ್ನಡ ಸಾಹಿತ್ಯ ಸೊರಗಿದಂತಾಗಿದೆ. ಇನ್ನಾದರೂ ವೈಜ್ಞಾನಿಕವಾಗಿ ಕನ್ನಡ ಸಾಹಿತ್ಯ ಕುರಿತು ಯುವಪೀಳಿಗೆ, ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕಿದೆ. ನೆರೆಯ ಮಹಾರಾಷ್ಟ್ರದಲ್ಲಿ ಮರಾಠಿ ಸಾಹಿತ್ಯಕ್ಕೆ ಸಾಕಷ್ಟು ಬೆಂಬಲ ಸಿಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಯುವ ಮುಖಂಡ ಪವನ ಕತ್ತಿ ಮಾತನಾಡಿ, ಕನ್ನಡಿಗರು ಸಹೃದಯಿಗಳು. ಭಾಷೆ, ಗಡಿ ವಿಚಾರದಲ್ಲಿ ಎಂದಿಗೂ ರಾಜಿಯಿಲ್ಲ. ಕನ್ನಡ ಭಾಷೆ ಪ್ರೀತಿಸಿ ಬೆಳೆಸುವುದರ ಜತೆಗೆ ಅನ್ಯ ಭಾಷೆಗಳನ್ನು ಗೌರವಿಸಬೇಕು. 12ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ವಚನ ಸಾಹಿತ್ಯ ಉತ್ತುಂಗ ಸ್ಥಿತಿಯಲ್ಲಿತ್ತು ಎಂದರು.
ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ವೇಳೆ ಸಾಹಿತಿಗಳಾದ ವೇಣುತಾಯಿ ಚೌಗಲಾ, ಅಜಯ ಉದೋಶಿ, ಲೀಲಾವತಿ ರಜಪೂತ ಅವರು ರಚಿಸಿದ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಜಿನೈಕ್ಯ ಆಚಾರ್ಯ 108 ವಿದ್ಯಾಸಾಗರಮುನಿ ಮಹಾರಾಜರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಕಸಾಪ ತಾಲೂಕು ಅಧ್ಯಕ್ಷ ಪ್ರಕಾಶ ಅವಲಕ್ಕಿ, ಎಸ್.ಕೆ.ಪಬ್ಲಿಕ್ ಶಾಲೆ ಚೇರಮನ್ ಪಿಂಟು ಶೆಟ್ಟಿ, ಅರಿಹಂತ ಸಹಕಾರಿ ಸಂಘದ ಅಧ್ಯಕ್ಷ ಭರಮಪ್ಪಾ ಚೌಗಲಾ, ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ, ಹಿರಿಯ ನ್ಯಾಯವಾದಿ ಪಿ.ಆರ್.ಚೌಗಲಾ, ಗ್ರಾಪಂ ಅಧ್ಯಕ್ಷ ರಾಮಪ್ಪಾ ಹುದ್ದಾರ, ಉಪಾಧ್ಯಕ್ಷೆ ಪ್ರೀತಿ ಚೌಗಲಾ, ಎಸ್.ನಂಜುಂಡಪ್ಪಾ, ಎಸ್.ಎಂ.ಶಿರಗೂರ ಮತ್ತಿತರರು ಇದ್ದರು.
ಡಾ.ಶ್ರೀಶೈಲ ಮಠಪತಿ ಉಪನ್ಯಾಸ ನೀಡಿದರು. ಜಯಪಾಲ ಚೌಗಲಾ ಸ್ವಾಗತಿಸಿದರು. ಡಾ.ಎಂ.ಎಸ್.ಖರಾಡೆ ಮತ್ತು ಎಂ.ಎಸ್.ಹೊಳಿಮಠ ನಿರೂಪಿಸಿದರು. ವಿ.ಬಿ.ಚೌಗಲಾ ವಂದಿಸಿದರು.