ಬೌ ಬೌ ಹಾವಳಿಗೆ ಬೆಚ್ಚಿದ ಬಳ್ಳಾರಿ ಜನ!

| Published : Feb 19 2024, 01:30 AM IST

ಬೌ ಬೌ ಹಾವಳಿಗೆ ಬೆಚ್ಚಿದ ಬಳ್ಳಾರಿ ಜನ!
Share this Article
  • FB
  • TW
  • Linkdin
  • Email

ಸಾರಾಂಶ

ಬೀದಿನಾಯಿಗಳ ನಿಯಂತ್ರಣ ವಿಚಾರದಲ್ಲಿ ಒಂದಷ್ಟು ಎಡವಟ್ಟಾದರೂ ಅಧಿಕಾರಿಗಳಿಗೆ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತಾಗಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ನಿಯಂತ್ರಣಕ್ಕೆ ಅದ್ಯಾಕೋ ಕಾಲ ಕೂಡಿ ಬರುತ್ತಿಲ್ಲ!

ನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿರುವ ನಾಯಿಗಳ ಸಂತಾನವನ್ನು ನಿಯಂತ್ರಿಸಬೇಕು ಎಂದು ನಗರದ ಅನೇಕ ಸಂಘ-ಸಂಸ್ಥೆಗಳು, ವಿವಿಧ ಬಡಾವಣೆಗಳ ನಿವಾಸಿಗಳು ಮಹಾನಗರ ಪಾಲಿಕೆಗೆ ಹತ್ತಾರು ಬಾರಿ ಮನವಿಪತ್ರಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಗರದಲ್ಲಿ ನಿತ್ಯ ಹತ್ತಾರು ನಾಯಿಕಡಿತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜತೆಗೆ ನಾಯಿಗಳ ದಾಳಿಯಿಂದಾಗಿ ಸಂಭವಿಸುವ ರಸ್ತೆ ಅಪಘಾತದಿಂದ ಅನೇಕರು ಗಂಭೀರವಾಗಿ ಗಾಯಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಭೀತಿಯಿಂದ ಓಡಾಡುವಂತಾಗಿದೆ.

15 ಸಾವಿರ ಬೀದಿನಾಯಿಗಳು: ಪಶು ಸಂಗೋಪನಾ ಇಲಾಖೆ ನಡೆಸಿರುವ ಸಮೀಕ್ಷೆಯ ಪ್ರಕಾರ ನಗರದಲ್ಲಿ 15 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿವೆ. ನಗರದ ಯಾವುದೇ ಬಡಾವಣೆ, ಪ್ರಮುಖ ರಸ್ತೆಗಳು ಹಾಗೂ ಒಳರಸ್ತೆಗಳತ್ತ ಕಣ್ಣು ಹಾಯಿಸಿದರೆ ಹಿಂಡು ಹಿಂಡು ನಾಯಿಗಳು ಕಂಡು ಬರುತ್ತವೆ. ಅಂದಾಜಿನ ಪ್ರಕಾರ ಪ್ರತಿ ವಾರ್ಡ್‌ನಲ್ಲಿ ಸುಮಾರು 350ರಿಂದ 400ಕ್ಕೂ ಹೆಚ್ಚು ಬೀದಿ ನಾಯಿಗಳಿವೆ.

ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ಸಹ ನೀಡುತ್ತಿಲ್ಲವಾದ್ದರಿಂದ ನಾಯಿ ದಾಳಿಗೆ ಒಳಗಾದವರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತಿದ್ದು, ಪುಟ್ಟ ಮಕ್ಕಳ ಮೇಲೂ ನಾಯಿ ದಾಳಿ ಪ್ರಕರಣಗಳು ಸಾಕಷ್ಟು ಬಾರಿ ನಡೆದಾಗ್ಯೂ ನಿಯಂತ್ರಣಕ್ಕೆ ಮುಂದಾಗದಿರುವುದು ಪಾಲಿಕೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಾಣಿಕ್ರೌರ್ಯ ತಡೆ ನಿಯಮ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ನಿಯಮ 2022ರ ಪ್ರಕಾರ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ಪ್ರಾಣಿಕಲ್ಯಾಣ ಸಂಸ್ಥೆಗಳಿಗೆ ಮಾತ್ರ ಬೀದಿಶ್ವಾನಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಯೋಜನೆ ಕೈಗೆತ್ತಿಕೊಳ್ಳಲು ಅವಕಾಶ. ಆದರೆ, ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳು ಟೆಂಡರ್ ಹಾಕುತ್ತಿಲ್ಲ. ಇದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.

ಬೀದಿನಾಯಿಗಳ ನಿಯಂತ್ರಣ ವಿಚಾರದಲ್ಲಿ ಒಂದಷ್ಟು ಎಡವಟ್ಟಾದರೂ ಅಧಿಕಾರಿಗಳಿಗೆ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತಾಗಿದೆ.

ಬೀದಿನಾಯಿಗಳ ಸಂತಾನ ನಿಯಂತ್ರಣ ಯೋಜನೆಯನ್ನು ಕೈಗೊಳ್ಳುವುದು ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯ. ಈ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವುದರಿಂದ ಬೀದಿನಾಯಿಗಳ ಸಂಖ್ಯೆ ನಿಯಂತ್ರಣವಾಗುವುದರ ಜತೆಗೆ ನಾಯಿ ಕಡಿತ ಮತ್ತು ರೇಬಿಸ್ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುವುದು. ಪ್ರತಿವರ್ಷ ಆಯವ್ಯಯದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಅಗತ್ಯವಿರುವ ಹಣಕಾಸು ಹಂಚಿಕೆ ಮಾಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ, ಪಶುಸಂಗೋಪನಾ ಇಲಾಖೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಂಟಿ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳು ಬೀದಿನಾಯಿ ನಿಯಂತ್ರಣ ಸಂಗತಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿಲ್ಲವಾದ್ದರಿಂದ ಜನರು ನಾಯಿದಾಳಿಗಳಿಂದ ತೊಂದರೆ ಅನುಭವಿಸುವಂತಾಗಿದೆ.ಟೆಂಡರ್ ಕರೆದಿದ್ದೇವೆ: ಬೀದಿನಾಯಿಗಳ ನಿಯಂತ್ರಕ್ಕೆ ಪಾಲಿಕೆ ಬದ್ಧವಾಗಿದೆ. ಸಂತಾನಹರಣ ಶಸ್ತ್ರಚಿಕಿತ್ಸೆಗೆ ಈಗಾಗಲೇ ನಾಲ್ಕು ಬಾರಿ ಟೆಂಡರ್ ಕರೆದಿದ್ದೇವೆ, ಯಾರೂ ಬಂದಿಲ್ಲ. ಐದನೇ ಬಾರಿ ಟೆಂಡರ್ ಕಾಲ್ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ. ಖಲೀಲ್‌ಸಾಬ್ ತಿಳಿಸಿದರು.ಪಾಲಿಕೆ ನಿರ್ಲಕ್ಷ್ಯ: ಬೀದಿನಾಯಿಗಳ ನಿಯಂತ್ರಣ ವಿಚಾರದಲ್ಲಿ ಮಹಾನಗರ ಪಾಲಿಕೆ ಅತ್ಯಂತ ನಿರ್ಲಕ್ಷ್ಯತನದಿಂದ ವರ್ತಿಸುತ್ತಿದೆ. ನಾಯಿಗಳ ದಾಳಿಗೆ ನಿತ್ಯ ಅನೇಕರು ತೊಂದರೆಗೆ ಒಳಗಾಗುತ್ತಿದ್ದಾರೆ. ಇದು ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು ಜಿ. ವಿಶ್ವೇಶ್ವರ ಪ್ರಶ್ನಿಸಿದರು.