ಮಾಧ್ಯಮಗಳದ್ದು ಲೋಪದೋಷ ತಿದ್ದುವ ಕಾಯಕ:

| Published : Feb 19 2024, 01:30 AM IST

ಸಾರಾಂಶ

ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಕೆಯುಡಬ್ಲ್ಯುಜೆ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜ ಹಾಗೂ ಸರ್ಕಾರದ ಲೋಪದೋಷಗಳನ್ನು ತಿದ್ದುವ ಮೂಲಕ ಸರಿದಾರಿಗೆ ತರುವ ಕಾಯಕವನ್ನು ಮಾಧ್ಯಮಗಳು ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಕೆಯುಡಬ್ಲ್ಯುಜೆ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಾಧ್ಯಮದ ಸಹಕಾರ ಶಿಕ್ಷಣ ಇಲಾಖೆಗೂ ಬೇಕಿದೆ. ಅನೇಕ ಬಾರಿ ಇಲಾಖೆಯ ಸಮಸ್ಯೆಗಳನ್ನು ಖುದ್ದಾಗಿ ಅರಿಯುವುದಕ್ಕೆ ಸಾಧ್ಯ ಆಗುವುದಿಲ್ಲ. ಶಾಲಾ ಕಟ್ಟಡಗಳ ದುರಸ್ತಿ, ಕಾಂಪೌಂಡ್, ಸೌಚಾಲಯ ಸೇರಿ ಅನೇಕ ಸಮಸ್ಯೆಗಳಿರುತ್ತವೆ. ಶಿಕ್ಷಕರು ಅವುಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ಅಂತಹ ಸಮಸ್ಯೆ ಗಳನ್ನು ಇಲಾಖೆಯ ಗಮನಕ್ಕೆ ತರುವಲ್ಲಿ ಮಾಧ್ಯಮಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಪತ್ರಕರ್ತರಿಗೆ ಕೆಲಸದ ಒತ್ತಡದ ನಡುವೆ ಕುಟುಂಬದೊಂದಿಗೆ ಕಾಲ ಕಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಗಬೇಕು. ಕೇವಲ ಬರೆಯುವುದು, ಸಂದರ್ಶನ ಮಾಡುವುದು ಮಾತ್ರವಲ್ಲ, ಕುಟುಂಬಕ್ಕೆ ಸಮಯ ನೀಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಪತ್ರಕರ್ತರ ಕುಟುಂಬಗಳು ಒಂದೆಡೆ ಸೇರಿ ಇಂತಹ ಚಟುವಟಿಕೆ ನಡೆಸುತ್ತಿರುವುದು ಉತ್ತಮ ಯೋಜನೆ. ಪೊಲೀಸ್ ಸಿಬ್ಬಂದಿ ಕೂಡ ಸದಾ ಒತ್ತಡದಲ್ಲಿದ್ದು, ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗದ ಸ್ಥಿತಿ ಇದೆ ಎಂದರು.ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿದರು. ಕೆಯುಡಬ್ಲ್ಯುಜೆ ಜಿಲ್ಲಾ ಘಟಕ ಅಧ್ಯಕ್ಷ ಕೆ.ವಿ.ಶಿವಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಬಂಡಿಗಡಿ ನಂಜುಂಡಪ್ಪ, ಎನ್.ರವಿಕುಮಾರ್, ವಿ.ಟಿ.ಅರುಣ್ ಮತ್ತಿತರರು ಇದ್ದರು.