ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ: ಶಾಸಕ ಜಿ.ಡಿ. ಹರೀಶ್ ಗೌಡ

| Published : Feb 20 2024, 01:51 AM IST / Updated: Feb 20 2024, 01:28 PM IST

ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ: ಶಾಸಕ ಜಿ.ಡಿ. ಹರೀಶ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ 2013 ರಿಂದ 2018 ತನಕ ನಡೆದಿದ್ದ ಅವ್ಯವಹಾರದಲ್ಲಿ ಭಾಗಿಯಾಗಿದ್ದವರನ್ನು ಮರು ನೇಮಕ ಮಾಡಿ ಸಹಕಾರ ಸಂಸ್ಥೆ ಲೂಟಿ ಮಾಡಿವರಿಗೆ ಅಧಿಕಾರ ನೀಡುತ್ತಿರುವ ಬಗ್ಗೆ  ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ ಗೌಡ  ಗುಡಗಿದರು.

ಕನ್ನಡಪ್ರಭ ವಾರ್ತೆ ಹುಣಸೂರು

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ 2013 ರಿಂದ 2018 ತನಕ ನಡೆದಿದ್ದ ಅವ್ಯವಹಾರದಲ್ಲಿ ಭಾಗಿಯಾಗಿ ಅಮಾನತುಗೊಂಡಿದ್ದ ನೌಕರುಗಳನ್ನು ಬ್ಯಾಂಕಿನ ಆಡಳಿತಾಧಿಕಾರಿಗಳು ಮರು ನೇಮಕ ಮಾಡಿ ಸಹಕಾರ ಸಂಸ್ಥೆ ಲೂಟಿ ಮಾಡಿವರಿಗೆ ಅಧಿಕಾರ ನೀಡುತ್ತಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಸಂಸ್ಥೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ ಗೌಡ ಸದನದಲ್ಲಿ ಗುಡಗಿದರು.

ವಿಧಾನಸಭೆ ಅಧೀವೇಶನದಲ್ಲಿ ಸೋಮವಾರ ನಡೆದ ಸಹಕಾರ ಇಲಾಖೆಯ ತಿದ್ದುಪಡಿಯ ಪ್ರಶ್ನೋತ್ರರ ವೇಳೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಡಿಸಿಸಿ ಬ್ಯಾಂಕ್ನಲ್ಲಿ ಹಾಲಿಯಿರುವ ಆಡಳಿತಾಧಿಕಾರಿ ಈ ಹಿಂದೆ 2018 ರಲ್ಲಿ ರಾಜ್ಯಾದ್ಯಂತ ಸದ್ದುಮಾಡಿದ್ದ ಡಿಸಿಸಿ ಬ್ಯಾಂಕಿನ 27 ಕೋಟಿ ರು. 

ಅವ್ಯವಹಾರದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಗಳನ್ನೇ ಮತ್ತೆ ಮೇಲ್ವಿಚಾರಕರಾಗಿ ತಂದು ಕೂರಿಸಿದ್ದಾರೆ. ಈ ಎಲ್ಲ ವಿಷಯಗಳಲ್ಲೂ ಸರ್ಕಾರದ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸ ಬೇಕೆಂದು ಒತ್ತಾಯಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೇಮಕಗೊಂಡ ಆಡಳಿತಾಧಿಕಾರಿಯ ಅವಧಿ ಮೂರು ತಿಂಗಳನ್ನು ಮೀರಬಾರದೆಂದು ಕಾಯ್ದೆ ತಿಳಿಸುತ್ತದೆ. 

ಆದರೆ ರಾಜ್ಯ ಸರ್ಕಾರ ತಿದ್ದುಪಡಿ ತರುವ ಮೂಲಕ ಆಡಳಿತಾಧಿಕಾರಿಯ ಮೂರು ತಿಂಗಳ ಅವಧಿಯನ್ನು ಕಿತ್ತು ಹಾಕಿ, ಸರ್ಕಾರದ ತಮಗೆ ಇಷ್ಟದ ಅನುಸರವಾಗಿ ಆಡಳಿತಾಧಿಕಾರಿಯನ್ನು ನೇಮಿಸಲಾಗಿದ್ದು, ಆದನ್ನು ಅನಿರ್ಧಿಷ್ಟ ಅವಧಿಗೆ ಮುಂದುವರೆಸುವ ನಿರ್ದಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಹಕಾರ ನಿಯಮಕ್ಕೆ ತಿಲಾಂಜಲಿ: ಸರ್ಕಾರ ಸಹಕಾರ ಸಂಘಗಳಲ್ಲಿ ಮೂವರು ನಾಮನಿರ್ದೇಶನ ಸದಸ್ಯರನ್ನು ನೇಮಿಸಲು ಸಹಕಾರ ಸಂಘದ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರ ಈಗಾಗಲೇ ವೈದ್ಯನಾಥನ್ ವರದಿಯನ್ವಯ ಕೇಂದ್ರ ಮತ್ತುನಬಾರ್ಡ್ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೂವರು ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವ ತಿದ್ದುಪಡಿ ತರಲು ಹೊರಟಿದೆ. 

ಆದರೆ 2008ರ ಮಾರ್ಚ್ 20ರಂದು ಅಂದಿನ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ನಬಾರ್ಡ್ ಒಂದು ಒಪ್ಪಂದ (ಎಂಒಯು, ಮೆಮೋರೆಂಡಂಮ್ ಆಫ್ ಅಂಡರ್ ಸ್ಟ್ಯಾಂಡಿಂಗ್) ಮಾಡಿಕೊಂಡಿವೆ. ಅದರಂತೆ ರಾಜ್ಯ ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನ ಆಯ್ಕೆ ಮಾಡಿಕೊಳ್ಳಬಾರೆದೆಂದು ಒಪ್ಪಿಗೆ ಸೂಚಿಸಲಾಗಿತ್ತು. 

ಅದರನ್ವಯ ಕೇಂದ್ರ ಸರ್ಕಾರ ರಾಜ್ಯದ 4,474 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ 556 ಕೋಟಿ ರು. ಗಳ ಆರ್ಥಿಕ ಸಹಾಯ ನೀಡಿದೆ. 

ಆದರೆ ರಾಜ್ಯ ಸರ್ಕಾರ ಮೂವರನ್ನು ನಾಮನಿರ್ದೇಶನ ಮಾಡಲು ಹೊರಟಲ್ಲಿ ಈ ಒಪ್ಪಂದದ ಸ್ಥಿತಿಗತಿಯೇನು ಕೇಂದ್ರ ಸರ್ಕಾರದಿಂದ ಪಡೆದಿರುವ ಸಹಾಯಧನ ಮತ್ತು ಒಪ್ಪಂದದ ಬಗ್ಗೆ ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಚುನಾವಣೆಗೆ ಮೂರು ತಿಂಗಳ ಅವಧಿ ಯಾಕೆ?
ಈಗ ನೋಟೀಸ್ ನೀಡಲು ಈ ಹಿಂದೆ ಇದ್ದ 45 ದಿನಗಳನ್ನು 30 ದಿನಗಳಿಗೆ ಕಡಿತಗೊಳಿಸಲಾಗಿದೆ. ಬಾಕಿಕಟ್ಟುವ ಕುರಿತಂತೆ 21 ದಿನಗಳನ್ನು 20 ದಿನಕ್ಕೆ ಕಡಿತಗೊಳಿಸಲಾಗಿದೆ. 

ಹೀಗಿದ್ದ ಮೇಲೆ ಸರ್ಕಾರಕ್ಕೆ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ಏಕೆ ಬೇಕು? ನೋಟಿಸ್ ನೀಡುವ ಅವಧಿಯನ್ನು ನೀವೇ ಕಡಿತಗೊಳಿಸಿ ನೀವೇ ಚುನಾವಣೆಗೆ ಮೂರು ತಿಂಗಳ ಅವಕಾಶ ಏಕೆ ಬೇಕಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಕೇಳುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದರು.

ನಿಶ್ಶಬ್ಧವಾಗಿ ಆಲಿಸಿದ ಸಭೆ: ಶಾಸಕ ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ತಮ್ಮ ಪಾಂಡಿತ್ಯವನ್ನು ದಾಖಲೆ ಸಮೇತ ವಿಧಾನಸಭೆಯಲ್ಲಿ ತೆರೆದಿಟ್ಟ ಪರಿ ಎಲ್ಲ ಸದಸ್ಯರನ್ನು ಆಕರ್ಷಿಸಿತು. 

ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಹಿರಿಯ ಸದಸ್ಯರೂ ಕೂಡ ಅವರು ವಾದ ಮಂಡಿಸುವ ಪರಿಯನ್ನು ಕಂಡು ಮೆಚ್ಚಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯೆ ಪ್ರವೇಶಿಸಿ ಸರ್ಕಾರ ನಡೆಸುವಷ್ಟೇ ಜವಾಬ್ದಾರಿಯ ಕೆಲಸ ಸಹಕಾರ ಸಂಘದ್ದೂ ಆಗಿದ್ದು, ಗಂಭೀರ ಚರ್ಚೆಯ ಅಗತ್ಯವಿದೆ ಎಂದು ಜಿ.ಡಿ. ಹರೀಶ್ ಗೌಡ ಸಾಥ್‌ ನೀಡಿದರು. ವಿಷಯದ ಗಂಭೀರತೆಯನ್ನು ಸದನಲ್ಲಿ ಶಾಸಕರು ಎತ್ತಿ ಹಿಡಿದರು.