ಸಾರಾಂಶ
ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ನಿವೃತ್ತ ಇಇ ಎಸ್.ಶಿವರಾಜು ಅವರಿಗೆ ಸೇರಿದ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಮನೆ, ತೋಟದ ಮನೆ, ಸಹೋದರನ ಮನೆ ಮತ್ತು ಕ್ರಷರ್ ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ನಿವೃತ್ತ ಇಇ ಎಸ್.ಶಿವರಾಜು ಅವರಿಗೆ ಸೇರಿದ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಮನೆ, ತೋಟದ ಮನೆ, ಸಹೋದರನ ಮನೆ ಮತ್ತು ಕ್ರಷರ್ ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದರು.ಮಂಡ್ಯ ಜಿಲ್ಲಾ ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು, ಡಿವೈಎಸ್ಪಿ ಸುನಿಲ್‌ಕುಮಾರ್, ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಮತ್ತು ಮೋಹನರೆಡ್ಡಿ ನೇತೃತ್ವದಲ್ಲಿ ಎರಡು ಕಾರುಗಳಲ್ಲಿ ಬಂದ ಅಧಿಕಾರಿಗಳ ತಂಡ ಇಜ್ಜಲಘಟ್ಟ ಗ್ರಾಮದ ಶಿವರಾಜು ಅವರ ಮನೆ ಸೇರಿದಂತೆ ಹಲವೆಡೆ ಗುರುವಾರ ಮುಂಜಾನೆ 5.30ಕ್ಕೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿರುವ ಶಿವರಾಜು ಅವರ ತೋಟದ ಮನೆ, ತಂದೆ ಮನೆ, ತಾಲೂಕಿನ ಬೆಳ್ಳೂರು ಸಮೀಪವಿರುವ ಕ್ರಷರ್ ಸೇರಿದಂತೆ ಮುಂತಾದೆಡೆ ಪರಿಶೀಲನೆ ನಡೆಸಿದ್ದಾರೆ. ಇನ್ನು ನಾಗಮಂಗಲದ ಟಿ.ಬಿ.ಬಡಾವಣೆಯಲ್ಲಿರುವ ಶಿವರಾಜು ಅವರ ಸಹೋದರ ಚಂದ್ರು ಅವರ ಮನೆ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.ನಿವೃತ್ತ ಇಇ ಶಿವರಾಜು ಅವರಿಗೆ ಸೇರಿದ ಮೈಸೂರಿನ ನಿವಾಸ, ತಾಲೂಕಿನ ಇಜ್ಜಲಘಟ್ಟ ಗ್ರಾಮದ ಮನೆ ಸೇರಿದಂತೆ ಒಟ್ಟು 6 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಇಜ್ಜಲಘಟ್ಟ ಗ್ರಾಮದ ಮನೆಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆವರೆಗೆ ಶೋಧ ಕಾರ್ಯ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಕೆಲವು ದಾಖಲೆಗಳು ಹಾಗೂ ಕೆಲವು ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.