ಮರಿಯಮನಹಳ್ಳಿ ಪಟ್ಟಣವನ್ನು ಅಭಿವೃದ್ಧಿಗೆ ಸಹಕರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ.

ಮರಿಯಮ್ಮನಹಳ್ಳಿ: ಪಟ್ಟಣದ ಜನರಿಗೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲು ಪಾವಗಡ ಜಾಕ್‌ವೆಲ್ ಪಂಪ್ ಹೌಸ್‌ನಲ್ಲಿ ಸ್ಥಾಪಿಸಲಾದ 150 ಕೆವಿ ಸಾಮರ್ಥ್ಯದ ಡೀಸೆಲ್ ಜನರೇಟರ್‌ ಕಾರ್ಯಾಚರಣೆಗೆ ಅಗತ್ಯವಾದ ಇಂಧನ ಖರೀದಿಗಾಗಿ ಎಸ್‌ಎಲ್‌ಆರ್‌ ಮೆಟಾಲಿಕ್ಸ್ ಸಂಸ್ಥೆಯು ಸಿಎಸ್ಆರ್ ನಿಧಿಯಿಂದ ₹4.50 ಲಕ್ಷ ಅನುದಾನದ ನೆರವು ನೀಡಿದೆ.

ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ ಮಾತನಾಡಿ, ಲೋಕಪ್ಪನಹೊಲ ಬಳಿ ಇರುವ ಎಸ್‌ಎಲ್‌ಆರ್‌ ಮೆಟಾಲಿಕ್ಸ್‌ ಸಿಎಸ್ಆರ್ ಅನುದಾನಗಳನ್ನು ಕಂಪನಿ ಸುತ್ತಮುತ್ತಲಿರುವ ಹಳ್ಳಿಗಳಿಗೆ ಉಪಯೋಗಿಸಿ ಕಾರ್ಖಾನೆಗಳ ಸುತ್ತಮುತ್ತಲಿನ ಗ್ರಾಮಗಳನ್ನು ಮತ್ತು ಮರಿಯಮನಹಳ್ಳಿ ಪಟ್ಟಣವನ್ನು ಅಭಿವೃದ್ಧಿಗೆ ಸಹಕರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಬೇಕಾಗುವ ಅಗತ್ಯ ಮೂಲಭೂತ ಸೌಕರ್ಯಗಳಿಗೆ ನೆರವಾಗಬೇಕು ಎಂದು ಅವರು ಹೇಳಿದರು.

ಕಂಪನಿಯ ಜನರಲ್ ಮ್ಯಾನೇಜರ್ ಧನಂಜಯ್ ಕುಮಾರ್ ಮಾತನಾಡಿ, ಸಮಾಜ ಸೇವೆ ಮತ್ತು ಸಮುದಾಯ ಅಭಿವೃದ್ಧಿಗೆ ಬದ್ಧವಾಗಿರುವ ಎಸ್‌ ಎಲ್‌ ಆರ್‌ ಮೆಟಾಲಿಕ್ಸ್ ಕಂಪನಿಯು ತನ್ನ ಸಿ.ಎಸ್.ಆರ್. ಅನುದಾನದಲ್ಲಿ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಇನ್ನೂ ಅಪಾರ ಕೊಡುಗೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಮುಂದಿನ ಹಣಕಾಸಿನ ವರ್ಷಗಳಲ್ಲಿ ಹಂತ ಹಂತವಾಗಿ ಪಟ್ಟಣದ ಅಭಿವೃದ್ಧಿಗೆ ಕಂಪನಿ ಅನುಧಾನ ನೀಡುತ್ತದೆ ಎಂದು ಅವರು ಹೇಳಿದರು.

ಎಸ್‌ಎಲ್‌ಆರ್ ಕಂಪನಿಯ ಅಧಿಕಾರಿಗಳಾದ ಮಲ್ಲಿಕಾರ್ಜುನ, ಶಿವಕುಮಾರ್ ತಳವಾರ್ ಮತ್ತು ಪಪಂ ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್, ಪಪಂ ಸದಸ್ಯರಾದ ಎಲ್‌. ವಸಂತ್ ಕುಮಾರ್ ಸೇರಿದಂತೆ ಪಪಂ ಸಿಬ್ಬಂದಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಮರಿಯಮ್ಮನಹಳ್ಳಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಎಸ್‌ ಎಲ್‌ ಆರ್‌ ಮೆಟಾಲಿಕ್ಸ್‌ನಿಂದ ಅನುದಾನದ ನೆರವು ನೀಡಿದೆ.