ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಾಂಜಾಗಾಗಿ ಬೆಳಗಾವಿ ಕೇಂದ್ರ ಕಾರಾಗೃಹದ ಜೈಲಿನ ಕೈದಿಯೊಬ್ಬ ಸಹಾಯಕ ಜೈಲರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಿ.11ರಂದು ಸಹಾಯಕ ಜೈಲರ್ ಜಿ.ಆರ್. ಕಾಂಬಳೆ ಅವರ ಮೇಲೆ ವಿಚಾರಣಾಧೀನ ಕೈದಿ ಶಾಹೀದ್ ಖುರೇಶಿ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಡಿ.11ರಂದು ಘಟನೆ ನಡೆದರೂ ಜೈಲಿನ ಅಧಿಕಾರಿ ಪೊಲೀಸರಿಗೆ ಮಾಹಿತಿ ತಿಳಿಸಿಲ್ಲ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಜೈಲು ಅಧಿಕಾರಿಗಳು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಸಹಾಯಕ ಜೈಲರ್ ಜಿ.ಆರ್. ಕಾಂಬಳೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜೈಲು ಮುಖ್ಯಅಧೀಕ್ಷಕ ಕೃಷ್ಣಮೂರ್ತಿ ಅವರು ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಸಿದ್ದಾರೆ.
ಅಂದು ನಡೆದಿದ್ದೇನು?ಡಿ.11ರಂದು ಸಹಾಯಕ ಜೈಲರ್ ಜಿ.ಆರ್. ಕಾಂಬಳೆ ಕೇಂದ್ರ ಕಾರಾಗೃಹದಲ್ಲಿ ಪಹರೆ ಕರ್ತವ್ಯ ಮಾಡುತ್ತ ವೃತ್ತ-2ರ ಬ್ಯಾರಕ್ ಸಂಖ್ಯೆ 08ರ ಹಿಂಭಾಗದ ಗೋಡೆಯ ಕಡೆಗೆ ಹೋಗಿದ್ದಾರೆ. ಗೋಡೆಯ ಪಕ್ಕದಲ್ಲಿ ಜಾಮರ್ ಕೇಬಲ್ ಅಳವಡಿಸಲು ಅಗೆದಿರುವ ಗುಂಡಿಯಲ್ಲಿ ಪ್ಲಾಸ್ಟಿಕ್ ಸುತ್ತಿದ ಪ್ಯಾಕೇಟ್ ಕಂಡಿದ್ದು ಅದನ್ನು ತೆಗೆದುಕೊಂಡು ಮುಖ್ಯ ಅಧೀಕ್ಷಕರಿಗೆ ವರದಿ ಸಲ್ಲಿಸಲು ಹೋಗುತ್ತಿದ್ದರು. ಈ ವೇಳೆ ಆರೋಪಿ ಶಾಹೀದ್ ಖುರೇಶಿ ಸಹಾಯಕ ಜೈಲರ್ ಅವರನ್ನು ತಡೆದು ತಳ್ಳಾಡಿ ಹಲ್ಲೆ ಮಾಡಿ, ಪ್ಯಾಕೇಟ್ ಕಿತ್ತುಕೊಂಡು ಓಡಿ ಕ್ವಾರಂಟೈನ್ ವಿಭಾಗದಲ್ಲಿ ಎಸೆದಿದ್ದಾನೆ. ಗಾಂಜಾದಂತಹ ಮಾದಕ ವಸ್ತುಗಳು ಕಾರಾಗೃದಲ್ಲಿ ನಿಷೇಧವಿದೆ ಎಂದು ಗೋತ್ತಿದ್ದರೂ ಈತನು ಅದನ್ನು ಒಳಗೆ ಸಾಗಿಸಲು ಪ್ರಯತ್ನಿಸಿದ್ದು ಅಪರಾಧವೆಂದು ದೂರಿನಲ್ಲಿ ತಿಳಿಸಲಾಗಿದೆ.