ವಯಸ್ಸಾದವರು ತಮ್ಮ ಆರೋಗ್ಯ ಸಮಸ್ಯೆ ಎದುರಾದಗ ದೂರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಿರಿಯರ ನೆರವಿಗೆ ಧಾವಿಸಬೇಕು. ತಕ್ಷಣ ಸಮಸ್ಯೆಗಳು ಎದುರಾದರೆ ಸ್ಪಂದಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂದೊಡ್ಡಿ

ಸಂಘ ಸಂಸ್ಥೆಗಳು ಗ್ರಾಮಗಳಲ್ಲಿರುವ ವಯಸ್ಸಾದವರಿಗೆ ನೆರವಾಗುವ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಲಹೆ ನೀಡಿದರು.

ಸಮೀಪದ ಸುಣ್ಣದದೊಡ್ಡಿ ಗ್ರಾಮದಲ್ಲಿ ಜೈ ಶ್ರೀರಾಮ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ, ಶ್ರೀರಾಮ ಮಂದಿರ ರಸ್ತೆ ಮತ್ತು ವಿಶ್ವೇಶ್ವರಯ್ಯ ಸರ್ಕಲ್ ಹಾಗೂ ಮುನೇಶ್ವರ ಸ್ವಾಮಿ ದೇವಸ್ಥಾನ ರಸ್ತೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದುಡಿಯಲು ಸ್ಥಳೀಯವಾಗಿ ಕೆಲಸಗಳಿಲ್ಲದೆ ಯುವಕರು ತಮ್ಮ ಪೋಷಕರನ್ನು ಗ್ರಾಮಗಳಲ್ಲಿಯೇ ಬಿಟ್ಟು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ಜೀವನಕ್ಕೆ ಅನಿವಾರ್ಯವಾದರೂ ಇದರಿಂದ ಹಳ್ಳಿಗಳಲ್ಲಿ ವೃದ್ದರು ಹೆಚ್ಚಾಗಿ ಅವರನ್ನು ನೋಡಿಕೊಳ್ಳಲು ಬಹುತೇಕ ಮನೆಗಳಲ್ಲಿ ಯಾರು ಇರುವುದಿಲ್ಲ ಎಂದರು.

ಇಂತಹ ಮನೆಗಳನ್ನು ಗುರುತಿಸಿ ಸಂಘ ಸಂಸ್ಥೆಗಳು 65 ರಿಂದ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ನಿಮ್ಮ ಗ್ರಾಮಗಳಲ್ಲಿದ್ದರೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಹಿರಿಯರ ಆರೋಗ್ಯ ಕಾಪಾಡಿಕೊಳ್ಳಲು ಸಣ್ಣಪುಟ್ಟ ಸಹಾಯ ಮಾಡಬೇಕು ಎಂದರು.

ವಯಸ್ಸಾದವರು ತಮ್ಮ ಆರೋಗ್ಯ ಸಮಸ್ಯೆ ಎದುರಾದಗ ದೂರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಿರಿಯರ ನೆರವಿಗೆ ಧಾವಿಸಬೇಕು. ತಕ್ಷಣ ಸಮಸ್ಯೆಗಳು ಎದುರಾದರೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಘದ ಸಂಸ್ಥಾಪಕರಾದ ಎಸ್.ಟಿ.ಚಿಕ್ಕಸ್ವಾಮಿ, ಎನ್.ರಾಮಲಿಂಗೇಗೌಡ, ಮೂಳೆ ತಜ್ಞ ಡಾ.ಮೌರ್ಯ, ಭಾರತೀ ಕಾಲೇಜು ಉಪನ್ಯಾಸಕರಾದ ಪಿ.ಎ.ಶ್ರೀದತ್ , ಚಂದ್ರಶೇಖರ್, ಬಸವರಾಜು, ಶಿಕ್ಷಕರಾದ ಎಸ್.ಟಿ. ನಂಜುಂಡೇಗೌಡ, ಎಸ್.ಎ.ಪುಟ್ಟಸ್ವಾಮಿ, ಗ್ರಾಮಸ್ಥರರಾದ ಕುಮಾರ, ಎಸ್.ಟಿ.ರಾಜೇಗೌಡ, ಎಸ್.ಕೆ.ರಾಜಣ್ಣ, ಎಸ್.ಲಿಂಗೇಗೌಡ, ನಂಜೇಗೌಡ, ಚಿಕ್ಕತಿಮ್ಮೇಗೌಡ, ಗ್ರಾಪಂ ಸದಸ್ಯರಾದ ಶಿವಲಿಂಗೇಗೌಡ, ಅಭಿಲಾಷ, ಪುಟ್ಟಸ್ವಾಮಿ, ಪೂಜಾ ರೇವಣ್ಣ, ವೆಂಕಟೇಶ್, ಚನ್ನೇಗೌಡ, ಸುರೇಶ್ ಮೂರ್ತಿ, ಮಹದೇವ, ರಾಮಲಿಂಗಯ್ಯ, ಮಹೇಶ್, ಶಿವಲಿಂಗೇಗೌಡ, ಸಿದ್ದೇಗೌಡ,ಬಿಳಿಯ, ವೆಂಕಟೇಶ್ ಕೊಂಟ್ಟಳ್ಳಿ ಗ್ರಾಮಸ್ಥರು ಇದ್ದರು.