ಹಾನಗಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಹೆಸ್ಕಾಂ ಇಇ ಸಿ.ಬಿ. ಹೊಸಮನೆ ಅವರು ರೈತರು, ರೈತ ಮುಖಂಡರ ಸಮಸ್ಯೆಗಳನ್ನು ಆಲಿಸಿದರು. ಕೃಷಿ ಚಟುವಟಿಕೆಗೆ ಅಡೆತಡೆಯಾಗದಂತೆ ವಿದ್ಯುತ್ ಪೂರೈಸುವ ಭರವಸೆ ನೀಡಿದರು.
ಹಾನಗಲ್ಲ: ಕೃಷಿ ಚಟುವಟಿಕೆಗೆ ಅಡೆತಡೆಯಾಗದಂತೆ ವಿದ್ಯುತ್ ನೀಡುವ ಭರವಸೆ, ೩ ತಿಂಗಳಿಗೊಮ್ಮೆ ರೈತರು ಅಧಿಕಾರಿಗಳ ಸಭೆ, ೩ ಹೊಸ ಗ್ರಿಡ್ ಕಾಮಗಾರಿ ಆರಂಭಕ್ಕೆ ವಿಳಂಬವಿಲ್ಲದೆ ಆದ್ಯತೆ, ಹಾನಗಲ್ಲ ಪಟ್ಟಣದಲ್ಲಿ ವಿದ್ಯುತ್ ಕಟ್‌ಗೆ ಕಡಿವಾಣದ ಭರವಸೆ- ಇದು ರೈತರು ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ಸಭೆಯ ಪ್ರಮುಖ ಫಲಿತಾಂಶ.
ಹಾನಗಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಹೆಸ್ಕಾಂ ಇಇ ಸಿ.ಬಿ. ಹೊಸಮನೆ, ರೈತರು, ರೈತ ಮುಖಂಡರ ಸಮಸ್ಯೆಗಳನ್ನು ಆಲಿಸಿದರು. ಓರೆಯಾದ ಕಂಬಗಳ ದುರಸ್ತಿ, ಜೋತು ಬಿದ್ದ ತಂತಿಗಳನ್ನು ಸರಿಪಡಿಸಲು ಸ್ಥಳದಲ್ಲೇ ಸಿಬ್ಬಂದಿಗೆ ಸೂಚಿಸಿದರು. ಸೆಕ್ಷೆನ್ ಅಧಿಕಾರಿಗಳ ಮಾತು ಕೇಳದ ಲೈನ್‌ಮನ್ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದರು. ಬೆಳಗಾಲಪೇಟೆ, ಬಮ್ಮನಹಳ್ಳಿ, ಗೊಂದಿ ಹೊಸ ವಿದ್ಯುತ್ ಗ್ರಿಡ್‌ಗಳ ಟೆಂಡರ್‌ಗೆ ಕ್ರಮ ಜರುಗಿಸಿ ಒಂದೆರಡು ತಿಂಗಳಿನಲ್ಲಿ ಕಾಮಗಾರಿ ಆರಂಭಕ್ಕೆ ಪ್ರಾಮಾಣಿಕ ಯತ್ನ ಮಾಡುತ್ತೇವೆ. ಪರಿವರ್ತಕಗಳಲ್ಲಿ ಕೇಬಲ್, ಎಲ್‌ಟಿ ಕಿಟ್, ಇಂಧನ ಬೇಕಿದ್ದರೆ ಕೂಡಲೇ ನೀಡುತ್ತೇವೆ. ಇದಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ಐಪಿ ಸೆಟ್‌ಗಳ ಹಳೆಯದಾದ ತಂತಿಗಳನ್ನು ಆಧ್ಯತೆ ಮೇಲೆ ಬದಲಾಯಿಸುತ್ತೇವೆ. ಇದರಲ್ಲಿ ಡೇಂಜರ್ ಝೋನ್‌ಗೆ ಆದ್ಯತೆ ನೀಡಲಾಗುತ್ತದೆ. ಶೀಘ್ರ ಸಂಪರ್ಕ ಯೋಜನೆಯಲ್ಲಿ ರೈತರು ಹಣ ಸಂದಾಯ ಮಡಿದರೆ ತಕ್ಷಣ ಪರಿವರ್ತಕ ಒದಗಿಸಿ, ಕಂಬ ತಂತಿ ಹಾಕಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಹೆಸ್ಕಾಂ ಸಿಬ್ಬಂದಿ ರೈತರೊಂದಿಗೆ ಸೌಜನ್ಯದಿಂದ ವರ್ತಿಸಲು ಕಟ್ಟಪ್ಪಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ಕೆಪಿಟಿಸಿಎಲ್ ಮೇಜರ್ ವರ್ಕ್ ಇಇ ವಿಜಯ ಜೋಶಿ ಮಾತನಾಡಿ, ವಿದ್ಯುತ್ ಸಂಪರ್ಕದ ವಿಷಯದಲ್ಲಿ ರೈತರ ಸಮಸ್ಯೆಗಳಿಗೆ ವಿಳಂಬವಿಲ್ಲದೆ ಸೇವೆ ಒದಗಿಸುತ್ತೇವೆ. ಮಳೆಗಾಲದ ಸಂದರ್ಭದಲ್ಲಿ ಕೆಲವೆಡೆ ಆಗಿರುವ ದೋಷಗಳನ್ನು ಶೀಘ್ರ ಸರಿಪಡಿಸಲಾಗುತ್ತದೆ. ಬೆಳಗಾಲಪೇಟೆ, ಬೊಮ್ಮನಹಳ್ಳಿ, ಗೊಂದಿ ಗ್ರಿಡ್‌ಗಳ ಟೆಂಡರ್ ಕಾಮಗಾರಿ ವಿಷಯದಲ್ಲಿ ವಿಶೇಷ ಕಾಳಜಿವಹಿಸಿ ಕೆಲಸ ಮಾಡಲಾಗುವುದು ಎಂದರು.
ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ತಾಲೂಕಿನ ವಿದ್ಯುತ್ ಸಮಸ್ಯೆಗಳ ಗಮನ ಸೆಳೆದು, ರೈತರಿಗೆ ವಿದ್ಯುತ್ ಶೋಷಣೆಯಾಗುತ್ತಿದೆ. ೧೫ ದಿನಗಳೊಳಗೆ ಸಾಂದರ್ಭಿಕ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ೨ ತಿಂಗಳಿನಲ್ಲಿ ಬೆಳಗಾಲಪೇಟೆ, ಬಮ್ಮನಹಳ್ಳಿ, ಗೊಂದಿ ಗ್ರಿಡ್ ಕಾಮಗಾರಿ ಆರಂಭವಾಗದಿದ್ದರೆ ಇಡೀ ತಾಲೂಕಿನ ವಿದ್ಯುತ್ ಸ್ಥಗಿತಗೊಳಿಸಿ ಹೋರಾಟಕ್ಕೆ ಮುಂದಾಗುತ್ತೇವೆ. ರೈತರಿಗೆ ಸಮರ್ಪಕವಾಗಿಲ್ಲದ ವಿದ್ಯುತ್ ಯಾರಿಗೂ ಬೇಡ. ಶೇಷಗಿರಿ ಸಮ್ಮಸಗಿ ಗ್ರಿಡ್‌ಗಳ ನಿರ್ವಹಣೆ ಲೋಪದಿಂದ ರೈತರಿಗೆ ವಿದ್ಯುತ್ ಸಿಗುತ್ತಿಲ್ಲ. ಜಂಗಲ್ ಕಟಿಂಗ್, ವಿದ್ಯು ಕಂಬಕ್ಕೆ ಏರಿದ ಬಳ್ಳಿಗಳನ್ನು ತೆಗೆಯದೇ ಇರುವುದರಿಂದ ಸಮಸ್ಯೆಯಾಗಿದೆ. ತಾಲೂಕಿನಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ರೈತರಿಗೆ ಹೆಸ್ಕಾಂ ಹೇಳುವಷ್ಟು ಹಣ ಭರಣ ಮಾಡಿ ವಿದ್ಯುತ್ ಪಡೆಯುವ ಆರ್ಥಿಕ ಶಕ್ತಿ ಇಲ್ಲ. ಅಕ್ರಮ-ಸಕ್ರಮದಲ್ಲಿಯೇ ಹೆಸ್ಕಾಂ ಎಲ್ಲ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಾದ ಹಾನಗಲ್ಲ ಎಇಇ ವಿ.ಎಸ್. ಮರಿಗೌಡರ, ವಾಗೀಶ ಕಡತಿ, ಎಇಇ ರುದ್ರಮುನಿ, ಇಲಾಖೆಯ ವಿವಿಧ ಸಿಬ್ಬಂದಿ, ರೈತ ಮುಖಂಡರಾದ ರುದ್ರಪ್ಪ ಹಣ್ಣಿ, ಮಹೇಶ ವಿರೂಪಣ್ಣನವರ, ಶ್ರೀಧರ ಮಲಗುಂದ, ಮಾಲತೇಶ ಪರಪ್ಪನವರ, ಸೋಮಣ್ಣ ಜಡೆಗೊಂಡರ್, ರವಿ ಸಂಕಪಾಳೆ, ಶಂಕ್ರಗೌಡ ಪಾಟೀಲ, ಎಂ.ಎಂ. ಬಡಗಿ, ಮೂಕಯ್ಯ ಗುರುಲಿಂಗಮ್ಮನವರ ಇದ್ದರು.