ಲೀಡ್‌.. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ದೇಶಕ್ಕೆ ಮಾದರಿ

| Published : Jul 17 2025, 12:33 AM IST

ಲೀಡ್‌.. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ದೇಶಕ್ಕೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ಜು.18 ರಂದು ನೆಡೆಯಲಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಮತ್ತು ಜು.19 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಜರುಗಲಿ

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಆಡಳಿತ ದೇಶಕ್ಕೆ ಮಾದರಿ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.

ಜು.18 ರಂದು ನೆಡೆಯಲಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಮತ್ತು ಜು.19 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಜರುಗಲಿರುವ 2 ವರ್ಷದ ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ದೇಶದಲ್ಲಿ ಯಾವ ರಾಜ್ಯದಲ್ಲಿಯೂ ಕೊಡಲಾಗದ ಅತ್ಯಂತ ಜನಪ್ರಿಯ ಯೋಜನೆಗಳನ್ನು ಈ ನಾಡಿಗೆ ನೀಡಿದ್ದಾರೆ. ಅವರು ನೀಡಿದಂತಹ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡತನ ಪ್ರಮಾಣ ಬಹುತೇಕ ತಗ್ಗಿದೆ. ಅದಕ್ಕೂ ಮಿಗಿಲಾಗಿ ನೆರೆಹೊರೆಯ ರಾಜ್ಯಗಳಿಂದಲೂ ನಮ್ಮ ರಾಜ್ಯಕ್ಕೆ ಬಂದು ಇಲ್ಲಿಯ ಯೋಜನೆಗಳಿಂದ ಪ್ರೇರೇಪಿತರಾಗಿ ಮಾಹಿತಿಯನ್ನು ಪಡೆದು ಅವರು ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ತರುವಂತಹ ಕೆಲಸಗಳಾಗಿದೆ ಎಂದು ಅವರು ಹೇಳಿದರು.

ಅಂತಹ ಜನಪರ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶ ಮೈಸೂರಿನಲ್ಲಿ ಜರುಗುತ್ತಿರುವುದು ಒಂದು ಐತಿಹಾಸಿಕ ಕಾರ್ಯಕ್ರಮ. ಇವತ್ತಿನ ದಿನ ಬಿಜೆಪಿ, ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿ ಕಂಗಾಲಾಗಿ ಸುಳ್ಳು ಪ್ರಚಾರಗಳನ್ನು ಪ್ರಾರಂಭಿಸಿದ್ದಾರೆ. ಅದು ಫಲಪ್ರದವಾಗುವುದಿಲ್ಲ. ಮತ್ತೊಮ್ಮೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದಾಗಿ ರಾಷ್ಟ್ರೀಯ ಮಟ್ಟದ ಸಮೀಕ್ಷೆಗಳಲ್ಲಿ ಭಿತ್ತರವಾಗುತ್ತಿದೆ ಎಂದರು.

ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರು ನಗರ ಮತ್ತು ಜಿಲ್ಲೆಯ ಇತಿಹಾಸದಲ್ಲಿ ಯಾರು ಮಾಡದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಮತ್ತು ಹೆಚ್ಚು ಹಣ ಬಿಡುಗಡೆ ಮಾಡುವ ಮೂಲಕ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಅವರೆಲ್ಲರ ಕೈ ಬಲಪಡಿಸಲು ಕೆ.ಆರ್. ವಿಧಾನಸಭಾ ಕ್ಷೇತ್ರದ ಜನ ಖಂಡಿತವಾಗಿ ಬೆಂಬಲವಾಗಿ ನಿಲ್ಲಲ್ಲಿದ್ದಾರೆ. ಸಾಧನಾ ಸಮಾವೇಶಕ್ಕೆ ಕ್ಷೇತ್ರದಿಂದ ಕನಿಷ್ಠ 10 ಸಾವಿರ ಜನರನ್ನು ಸೇರಿಸಲು ನಮ್ಮ ಕಾರ್ಯಕರ್ತರು ಸಿದ್ದರಿದ್ದೇವೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ವಕ್ತಾರ ಹಾಗೂ ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಮಾತನಾಡಿ, ಮೈಸೂರಿನಲ್ಲಿ 2 ವರ್ಷದ ಸಾಧನಾ ಸಮಾವೇಶವನ್ನು ಮಾಡುತ್ತಿದ್ದೇವೆ. ಇದು ಬಡವರ ಕಾರ್ಯಕ್ರಮ, ಸಿದ್ದರಾಮಯ್ಯ ಸರ್ಕಾರ ಅಂದ್ರೆ ಬಡವರ ಸರ್ಕಾರ. ಈ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರುವ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಕೈ ಬಲಪಡಿಸಬೇಕು. ಆ ಮೂಲಕ ಮತ್ತಷ್ಟು ಜನಪರ ಕಾರ್ಯಕ್ರಮಗಳು ಈ ಸರ್ಕಾರದಿಂದ ಬರಲಿ ಎಂದು ಆಶೀರ್ವದಿಸಬೇಕು ಎಂದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಮಾಜಿ ಮೇಯರ್ ಗಳಾದ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮಾಜಿ ಉಪ ಮೇಯರ್ ಸಿದ್ದರಾಜು, ಪಾಲಿಕೆ ಮಾಜಿ ಸದಸ್ಯರಾದ ಎಂ. ಸುನಿಲ್, ಶೋಭಾ ಸುನಿಲ್, ಜೆ. ಗೋಪಿ, ಪ್ರಭುಮೂರ್ತಿ, ಕೆ.ವಿ. ಮಲ್ಲೇಶ್, ಮುಖಂಡರಾದ ಶ್ರೀನಾಥ್ ಬಾಬು, ರಾಮಪ್ಪ ರಮೇಶ್, ಮೊಗಣ್ಣಾಚಾರ್, ಭವ್ಯಾ, ಇಂದಿರಾ, ಮಲ್ಲಾಜಮ್ಮ, ಗುಣಶೇಖರ್, ಮಹ್ಮದ್ ಫಾರೂಖ್, ರಾಕೇಶ್, ನವೀನ್ ಕೆಂಪಿ, ಮದನ್, ಅಜಯ್ ಮೊದಲಾದವರು ಇದ್ದರು.