ಕನಿಷ್ಠ 7500 ರು. ಮಾಸಿಕ ಪಿಂಚಣಿ ನೀಡಬೇಕು

| Published : Dec 31 2024, 01:03 AM IST

ಸಾರಾಂಶ

ಇಪಿಎಸ್-95 ಪಿಂಚಿಣಿದಾರರ ಸಮಸ್ಯೆಗಳ ಕುರಿತು ಪ್ರಧಾನಿ ಮತ್ತು ವಿತ್ತ ಸಚಿವರ ಜೊತೆ ಎರಡರೆಡು ಬಾರಿ ಚರ್ಚೆ ನಡೆಸಿದ್ದು, ಸುಪ್ರಿಂಕೋರ್ಟಿನ ಆದೇಶದಂತೆ ಕನಿಷ್ಠ 7500 ರು. ಮಾಸಿಕ ಪಿಂಚಿಣಿ ನೀಡುವ ಭರವಸೆಯನ್ನು ನೀಡಿದ್ದಾರೆ. ಒಂದು ವೇಳೆ ಸರಕಾರ ಮಾತಿಗೆ ತಪ್ಪಿದರೆ, ದೇಶದ 78 ಲಕ್ಷ ನಿವೃತ್ತ ನೌಕರರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವುದು ಅನಿವಾರ್ಯವಾಗಲಿದೆ ಎಂದು ಎನ್.ಎ.ಸಿ. ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಇಪಿಎಸ್-95 ಪಿಂಚಿಣಿದಾರರ ಸಮಸ್ಯೆಗಳ ಕುರಿತು ಪ್ರಧಾನಿ ಮತ್ತು ವಿತ್ತ ಸಚಿವರ ಜೊತೆ ಎರಡರೆಡು ಬಾರಿ ಚರ್ಚೆ ನಡೆಸಿದ್ದು, ಸುಪ್ರಿಂಕೋರ್ಟಿನ ಆದೇಶದಂತೆ ಕನಿಷ್ಠ 7500 ರು. ಮಾಸಿಕ ಪಿಂಚಿಣಿ ನೀಡುವ ಭರವಸೆಯನ್ನು ನೀಡಿದ್ದಾರೆ. ಒಂದು ವೇಳೆ ಸರಕಾರ ಮಾತಿಗೆ ತಪ್ಪಿದರೆ, ದೇಶದ 78 ಲಕ್ಷ ನಿವೃತ್ತ ನೌಕರರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವುದು ಅನಿವಾರ್ಯವಾಗಲಿದೆ ಎಂದು ಎನ್.ಎ.ಸಿ. ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ತಿಳಿಸಿದ್ದಾರೆ.ನಗರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗ, ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಟ್ರಸ್ಟ್ ವತಿಯಿಂದ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಗೆ ಚಾಲನೆ ನೀಡಿ ಮಾತನಾಡಿದರು.ತಮ್ಮ ಜೀವಿತಾವಧಿಯನ್ನು ಜನರ ಸೇವೆಗೆ ಮುಡಿಪಾಗಿಟ್ಟಿರುವ ನಾವುಗಳು ಮಾಸಿಕ 800 ರೂಗಳಿಂದ 1800 ವರೆಗೆ ಮಾತ್ರ ಪಿಂಚಿಣಿ ಪಡೆಯುತ್ತಿದ್ದು, ಇಂದಿನ ಬೆಲೆ ಹೆಚ್ಚಳದಲ್ಲಿ ಯಾವುದಕ್ಕೂ ಸಾಲದಾಗಿದೆ. ಹಾಗಾಗಿ ಸುಪ್ರಿಂಕೋರ್ಟಿನ ಆದೇಶದಂತೆ ಕನಿಷ್ಠ ಮಾಸಿಕ 7500 ರು. ಪಿಂಚಿಣಿ ಮತ್ತು ಡಿ.ಎ. ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.ನಮ್ಮ ಸೇವಾವಧಿಯಲ್ಲಿ ಪಿಂಚಿಣಿಗೋಸ್ಕರವೇ ವೇತನದಿಂದ ಕಟಾಯಿಸಿದ ಹಣದಲ್ಲಿ ನಮಗೆ ಭೀಕ್ಷೆಯ ರೀತಿ ನೀಡುತ್ತಿದ್ದಾರೆ. 35 ವರ್ಷ ಸೇವೆ ಸಲ್ಲಿಸಿದ ಓರ್ವ ನೌಕರರ ಇಪಿಎಫ್ ಹಣ ಕನಿಷ್ಟವೆಂದರೂ 12 ಲಕ್ಷ ಇರುತ್ತದೆ. ಇದೇ 12 ಲಕ್ಷ ಹಣವನ್ನು ಯಾವುದಾದರೂ ಸಹಕಾರಿ ಬ್ಯಾಂಕಿನಲ್ಲಿ ಎಫ್.ಡಿ. ಮಾಡಿದರೆ ಮಾಸಿಕ 15 ಸಾವಿರ ರು. ಬಡ್ಡಿ ಬರುತ್ತದೆ. ಆದರೆ ಸರಕಾರ ಮಾತ್ರ ನಮಗೆ 800 ರಿಂದ 1500 ರೂ ವರೆಗೆ ಪಿಂಚಿಣಿ ನೀಡುತ್ತಿದೆ. ಇದು ಅನ್ಯಾಯ ಸರಿಪಡಿಸಬೇಕು ಎಂಬುದು ನಮ್ಮ ಒಕ್ಕೊರಲ ಆಗ್ರಹವಾಗಿದೆ. ಸರಕಾರ ಇಪಿಎಸ್-95 ನೌಕರರ ಮೇಲಿರುವ ಮಲತಾಯಿ ಧೋರಣೆಯನ್ನು ಬಿಟ್ಟು ನಮ್ಮ ಮನವಿಗೆ ಸ್ಪಂದಿಸಬೇಕು. ಕಳೆದ ಆರು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತಿದ್ದೇವೆ. ಸರಕಾರ ಸ್ಪಂದಿಸದಿದ್ದಲ್ಲಿ ಮಾಡು,ಇಲ್ಲವೇ ಮಡಿ ಹೋರಾಟ ಅನಿವಾರ್ಯ ಎಂದು ತಿಳಿಸಿದರು.ಭಾರತ ಸರಕಾರ ಅಂತ್ಯೋದಯ ಎಂಬ ಮಾತುಗಳನ್ನಾಡುತ್ತದೆ. ನಿಜವಾದ ಅಂತ್ಯೋದಯ ಫಲಾನುಭವಿಗಳೆಂದರೆ ಅದು ನಿವೃತ್ತ ನೌಕರರು. ಅವರಿಗೆ ದುಡಿಯಲು ವಯಸ್ಸಿಲ್ಲ,ಆ ರೋಗ್ಯವೂ ಇಲ್ಲ. ಆರ್ಥಿಕವಾಗಿಯೂ ಸಬಲರಲ್ಲ. ಇದನ್ನು ಸರಕಾರ, ಪ್ರಧಾನಮಂತ್ರಿಗಳು, ವಿತ್ತಸಚಿವರು ಮತ್ತು ಕಾರ್ಮಿಕ ಮಂತ್ರಿಗಳು ಅರ್ಥ ಮಾಡಿಕೊಂಡು,ಅಗತ್ಯ ಸಂಪನ್ಮೂಲ ಕ್ರೂಢೀಕರಿಸಿ,ಇ ಪಿಎಸ್-95 ನಿವೃತ್ತ ನೌಕರರಿಗೆ ಸಂಧ್ಯಾ ಕಾಲದಲ್ಲಿ ಗೌರವಯುತ ಜೀವನ ನಡೆಸಲು ಸರಕಾರ ಸಹಕಾರ ನೀಡಬೇಕೆಂಬುದು ರಾಷ್ಟ್ರದ 78 ಲಕ್ಷ ನೌಕರರ ಬೇಡಿಕೆಯಾಗಿದೆ. ಇದು ನಮ್ಮ ಹಕ್ಕು, ನೀವೆಲ್ಲರೂ ಕೈ ಜೋಡಿದರೆ ಇದನ್ನು ಪಡೆದೇ ತೀರುತ್ತೇವೆ ಎಂಬ ಭರವಸೆ ನಮಗಿದೆ ಎಂದು ಕಮಾಂಡರ್ ಅಶೋಕ್ ರಾವತ್ ನುಡಿದರು.ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ನಮ್ಮ ನಿಗಮದಲ್ಲಿ ನಿವೃತ್ತ ನೌಕರರಿಗೆ ವೇತನ ನೀಡುವುದಕ್ಕೆ ಪ್ರಥಮ ಅದ್ಯತೆ ನೀಡಲಾಗಿದೆ. ನಿವೃತ್ತ ನೌಕರರು ತಮ್ಮ ದುಖಃ ದುಮ್ಮಾನಗಳನ್ನು ಹೇಳಿಕೊಳ್ಳಲು ಇಂದು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸ್ಥಾಪಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ, ಎನ್.ಎ.ಎಸ್ ಜೊತೆ ಕೈಜೋಡಿಸಿ ನಿಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದೀರಿ, ಹಿಂಜರಿಕೆ ಬಿಟ್ಟು, ಬೇಡಿಕೆಗಳ ಈಡೇರಿಕೆಗೆ ಮುಂದಾಗಿ ಎಂದರು.ಎನ್.ಎ.ಸಿ. ಕರ್ನಾಟಕ ಅಧ್ಯಕ್ಷ ಜಿ.ಎಸ್.ಎಂ. ಸ್ವಾಮಿ ಮಾತನಾಡಿ,ಎನ್.ಎ.ಸಿ ದೇಶದ ೧೯ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಧಾನಿ, ವಿತ್ತ ಸಚಿವರನ್ನು ಭೇಟಿ ಮಾಡಿ, ನಿವೃತ್ತ ನೌಕರರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಜಾರಿಗೆ ಬಂದ ಇಪಿಎಸ್ -95 ಯೋಜನೆಯನ್ನು ಪರಿಷ್ಕರಿಸಿ, ಸುಪ್ರಿಂಕೋರ್ಟಿನ ನಿರ್ದೇಶನದಂತೆ ಕನಿಷ್ಠ 7500 ರೂ ಮಾಸಿಕ ಪಿಂಚಿಣಿ ನೀಡಬೇಕೆಂದು ಕಳೆದ 6ವರ್ಷಗಳಿಂದ ಸತ್ಯಾಗ್ರಹ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ನನಗೆ ಒಳ್ಳೆಯ ಸುದ್ದಿ ಬರಲಿದೆ ಎಂಬ ವಿಶ್ವಾಸವಿದೆ.ನಿವೃತ್ತ ನೌಕರರು ಎನ್.ಎ.ಸಿ.ಗೆ ಸದಸ್ಯರಾಗುವ ಮೂಲಕ ನಮ್ಮ ಸಂಘಟನೆಯನ್ನು ಬಲಪಡಿಸಬೇಕೆಂದರು.ಎನ್.ಎ.ಸಿ.ಯ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಅರಸ್, ಮುಖಂಡರಾದ ಸರೀತಾ ನಾರ್ಕೇಡ್, ಕಾನೂನು ಸಲಹೆಗಾರರಾದ ನಂಜುಂಡೇಗೌಡ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅವರುಗಳು ಮಾತನಾಡಿದರು. ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಭೀಮಾನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಎನ್.ಎ.ಸಿ ಮತ್ತು ಇಪಿಎಸ್-೯೫ ನ ಜಿಲ್ಲಾಧ್ಯಕ್ಷರಾದ ದೊಡ್ಡೇಗೌಡ,ಎಂ.ಎಲ್, ಉಮೇಶ್, ತುಳಿಸಿರಾಮ್,ನಾಗರಾಜು, ಎಂ.ಷಡಕ್ಷರಿ, ಶಿವಶಂಕರ್, ಉಮೇಶಕುಮಾರ್, ರಾಜಗೋಪಾಲ್, ರಾಜಶೇಖರ್, ಎಂ.ಎಸ್.ವೆಂಕಟನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ: