ಸಾರಾಂಶ
ಹಾನಗಲ್ಲ: ಪ್ರತಿಯೊಬ್ಬ ಮನುಷ್ಯ ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಶಿಕ್ಷಕರಾದ ಎ. ಆಯ್. ಮಳಿಯಣ್ಣನವರ ತಿಳಿಸಿದರು.ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೨೦೦೬-೦೭ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಇಂದು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ಈ ಸಮಾಜದ ಕೂಲಿ, ಕಾರ್ಮಿಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಅಡಗಿರುತ್ತದೆ. ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.ಪ್ರಾಚಾರ್ಯ ಡಾ. ಸದಾಶಿವಪ್ಪ ಎನ್. ಅಧ್ಯಕ್ಷತೆವಹಿಸಿ ಮಾತನಾಡಿ, ಶಿಕ್ಷಕರೆಂದರೆ ಪಾಠ ಬೋಧಿಸುವವರು ಮಾತ್ರವಲ್ಲ, ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು, ಪಠ್ಯದ ಜೊತೆಗೆ ಜೀವನ ಮೌಲ್ಯಗಳನ್ನು ತಿಳಿಸುವವರು. ನಮ್ಮ ಸನಾತನ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವಪೂರ್ಣ ಸ್ಥಾನವನ್ನು ಕಲ್ಪಿಸಲಾಗಿದೆ. ಗುರುವನ್ನು ದೇವರಿಗೆ ಹೋಲಿಸಲಾಗಿದೆ. ಇಂದು ವಿಜ್ಞಾನ, ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮವಾದಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿವು ಎಂದರು. ಮುಖ್ಯ ಅತಿಥಿಯಾಗಿ ಶಿಕ್ಷಕಿ ಬಿ. ಎಸ್. ಚಿನ್ನಮುಳಗುಂದ ಮಾತನಾಡಿ, ಗುರುವಂದನಾ ಕಾರ್ಯಕ್ರಮವು ಶಿಕ್ಷಣ ಕ್ಷೇತ್ರದಲ್ಲಿ ಗುರುಗಳಿಗೆ ಸಲ್ಲುವ ಗೌರವವನ್ನು ಸಮರ್ಪಿಸುವ ಉದ್ದೇಶದಿಂದ ಆಯೋಜಿಸಲ್ಪಡುವ ಸಮಾರಂಭವಾಗಿದೆ. ಹಾಗೆಯೆ ಶಾಲಾ ಸಮುದಾಯದಲ್ಲಿ ಗುರು-ಶಿಷ್ಯರ ಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎಂದರು.ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಸಂತೋಷಕುಮಾರ ಓ., ಪಾಲಾಕ್ಷ ಅಜಗೊಂಡರ, ಹೇಮಾ ನಾಯಕ್, ನಂಜು ಒಡೆಯನಪುರ್, ಕೃಷ್ಣ ಮುಕರಿ, ಮಂಜಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಪ್ರಾಧ್ಯಾಪಕರಾದ ಎಂ.ಬಿ. ನಾಯ್ಕ್, ಪ್ರೊ. ಯಲ್ಲಪ್ಪ ಕರಿದುರ್ಗನವರ, ದೀಪಕ್ ದೇಶಪಾಂಡೆ, ಶಿಕ್ಷಕ ಎಚ್.ಎಮ್.ಪಾಟೀಲ್, ಡಾ. ರಾಘವೇಂದ್ರ ಮಾಡಳ್ಳಿ, ಸಿ.ಎಸ್. ವಸ್ತ್ರದ್, ಎಸ್. ಸಿ. ವಿರಕ್ತಮಠ, ಎಂ. ಎಂ. ನಿಂಗೋಜಿ, ಡಾ. ಪ್ರಕಾಶ್ ಹುಲ್ಲೂರ್, ಡಾ. ಹರೀಶ್ ಟಿ.ಟಿ., ಡಾ. ಜೀತೇಂದ್ರ ಜಿ.ಟಿ., ಡಾ. ಪ್ರಕಾಶ್ ಜಿ.ವಿ., ಡಾ. ರುದ್ರೇಶ್ ಬಿ.ಎಸ್., ಪ್ರೊ. ದಿನೇಶ್ ಆರ್., ಮಂಜಪ್ಪ ಪರಸಿಕ್ಯಾತಿ, ಜಗದೀಶ ನಿಂಬಕ್ಕನವರ, ಮಾಲತೇಶ ಜಡೆದ, ಎಲ್. ಎಫ್. ಹಾನಗಲ್ಲ ಪಾಲ್ಗೊಂಡಿದ್ದರು.ವಿಶ್ವನಾಥ್ ಹಿರೇಮಠ ಪ್ರಾರ್ಥಿಸಿದರು. ಯುವರಾಜ್ ಎನ್. ಸ್ವಾಗತಿಸಿದರು. ಡಾ. ವಿಶ್ವನಾಥ ಬೊಂದಾಡೆ ವಂದಿಸಿದರು. ಪ್ರಭು ಹಾವಕ್ಕನವರ ಮತ್ತು ನಂದಾ ಸುಂಕದ ನಿರೂಪಿಸಿದರು.