ಅಖಿಲ ಭಾರತ ಕನ್ನಡ ಸಮ್ಮೇಳನದ ಆರಂಭದಲ್ಲೇ ‘ರಾಜಕೀಯ’ ಶುರು..!

| Published : Jul 24 2024, 12:20 AM IST / Updated: Jul 24 2024, 12:21 AM IST

ಅಖಿಲ ಭಾರತ ಕನ್ನಡ ಸಮ್ಮೇಳನದ ಆರಂಭದಲ್ಲೇ ‘ರಾಜಕೀಯ’ ಶುರು..!
Share this Article
  • FB
  • TW
  • Linkdin
  • Email

ಸಾರಾಂಶ

ಮೂವತ್ತು ವರ್ಷಗಳ ಬಳಿಕ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆಯಾಗಿದೆ. ಇತ್ತೀಚೆಗಷ್ಟೇ ದಿನಾಂಕ ಘೋಷಣೆಯಾಗಿ ಸಮ್ಮೇಳನ ಚಟುವಟಿಕೆಗಳಿಗೆ ಚಾಲನೆ ದೊರಕಿರುವ ಬೆನ್ನಲ್ಲೇ ರಾಜಕೀಯ ಶುರುವಾಗಿದೆ. ರಾಜಕೀಯ ಪ್ರಭಾವ ಬಳಸಿ ಮಂಡ್ಯಕ್ಕೆ ಸಮ್ಮೇಳನ ತರಲು ಶ್ರಮಿಸಿದವರನ್ನು ದೂರವಿಡುವ ಪ್ರಯತ್ನ ನಡೆಸಲಾಗುತ್ತಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮೂವತ್ತು ವರ್ಷಗಳ ಬಳಿಕ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆಯಾಗಿದೆ. ಇತ್ತೀಚೆಗಷ್ಟೇ ದಿನಾಂಕ ಘೋಷಣೆಯಾಗಿ ಸಮ್ಮೇಳನ ಚಟುವಟಿಕೆಗಳಿಗೆ ಚಾಲನೆ ದೊರಕಿರುವ ಬೆನ್ನಲ್ಲೇ ರಾಜಕೀಯ ಶುರುವಾಗಿದೆ.

ರಾಜಕೀಯ ಪ್ರಭಾವ ಬಳಸಿ ಮಂಡ್ಯಕ್ಕೆ ಸಮ್ಮೇಳನ ತರಲು ಶ್ರಮಿಸಿದವರನ್ನು ದೂರವಿಡುವ ಪ್ರಯತ್ನ ನಡೆಸಲಾಗುತ್ತಿದೆ. ಕೆಲವರನ್ನು ಬದಲಾವಣೆ ಮಾಡುವ ಪ್ರಕ್ರಿಯೆ ಒಳಗೊಳಗೆ ನಡೆಯುತ್ತಿದೆ. ಸಮ್ಮೇಳನ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ರಚಿಸಲಾಗುತ್ತಿರುವ ಸಮಿತಿಗಳಿಂದಲೂ ಅವರನ್ನು ಹೊರಗಿಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ರಾಜಕೀಯವಾಗಿ ಪ್ರಭಾವ ಹೊಂದಿರುವವರು ತಮ್ಮ ನಾಯಕರ ಮೂಲಕ ಒತ್ತಡ ತಂದು ಸಮಿತಿಗೆ ಸೇರಿಕೊಳ್ಳುತ್ತಿದ್ದಾರೆಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

ನಾಗಮಂಗಲ ತಾಲೂಕು ಅಧ್ಯಕ್ಷರ ಬದಲಾವಣೆ:

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೇಲೆ ಒತ್ತಡ ತಂದು ಸಮ್ಮೇಳನಕ್ಕಾಗಿ ಮತ್ತು ಸಾಹಿತ್ಯ ಪರಿಷತ್‌ಗೆ ಕೆಲಸ ಮಾಡಿದವರನ್ನು ಹೊರಗಿಡುತ್ತಿರುವುದರಿಂದ ಸಮ್ಮೇಳನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಉದಾಹರಣೆಗೆ ನಾಗಮಂಗಲ ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಬಸವೇಗೌಡ ಕರಾಡಿ ಅವರನ್ನು ಏಕಾಏಕಿ ಬದಲಾವಣೆ ಮಾಡಲಾಗಿದೆ. ಅವರು ಕಳೆದ ಎಂಟು ವರ್ಷಗಳಿಂದ ಪರಿಷತ್‌ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬಂದು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಳೆದೊಂದು ವರ್ಷದಿಂದ ಸಮ್ಮೇಳನದ ಕೆಲಸಗಳನ್ನು ಮಾಡುತ್ತಿದ್ದರು. ಈಗ ಅವರನ್ನು ಬದಲಾಯಿಸಿ ಚಂದ್ರಶೇಖರ್ ಅವರನ್ನು ನೇಮಿಸಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಮಾತುಗಳು ಪರಿಷತ್ ವಲಯದಲ್ಲಿ ಕೇಳಿಬರುತ್ತಿವೆ.

ಮೂರು ತಾಲೂಕು ಅಧ್ಯಕ್ಷರ ಬದಲಾವಣೆಗೆ ಸಂಚು:

ಇದೇ ಮಾದರಿಯಲ್ಲಿ ಇನ್ನೂ ಮೂರು ತಾಲೂಕು ಘಟಕಗಳ ಅಧ್ಯಕ್ಷರನ್ನು ಬದಲಾವಣೆ ಮಾಡುವುದಕ್ಕೆ ರಾಜಕೀಯ ಒಳಸಂಚು ನಡೆಯುತ್ತಿದೆ. ಹೀಗೆ ಸಿ.ಕೆ.ರವಿಚಾಮಲಾಪುರ ಅವಧಿಯಲ್ಲಿ ನೇಮಕಗೊಂಡಿದ್ದವರನ್ನು ಬದಲಾವಣೆ ಮಾಡುತ್ತಾ ಹೋದರೆ ಸಮ್ಮೇಳನ ಯಶಸ್ವಿಯಾಗುವುದು ಹೇಗೆ. ಎಲ್ಲರನ್ನೂ ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಕಡೆ ಒಬ್ಬೊಬ್ಬರನ್ನು ದೂರವಿಡುತ್ತಿರುವುದು ನ್ಯಾಯೋಚಿತವಾದ ಕ್ರಮವಲ್ಲ ಎಂದೂ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷದ ಮೂಲಕ ಗುರುತು:

ಸಮಿತಿಗಳಿಗೆ ನೇಮಕವಾಗುವ ಸಮಯದಲ್ಲಿ ಅಥವಾ ತಾಲೂಕು ಘಟಕಗಳ ಅಧ್ಯಕ್ಷರ ಬದಲಾವಣೆ ಮಾಡುವ ವೇಳೆ ಪಕ್ಷದ ಮೂಲಕ ಅವರನ್ನು ಗುರುತಿಸಿ ದೂರವಿರಿಸಲಾಗುತ್ತಿದೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆಂಬ ಆರೋಪ ಹೊರಿಸಿ ಆ ಜಾಗದಲ್ಲಿ ತಾವು ಕೂರಲು ಬಯಸುವವರು ರಾಜಕೀಯವಾಗಿ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ. ಸಮ್ಮೇಳನಕ್ಕೆ ಎಲ್ಲಾ ಪಕ್ಷದವರೂ ಬೇಕು. ಒಂದೇ ಪಕ್ಷದವರಿಂದ ಸಮ್ಮೇಳನ ನಡೆಸಲಾಗುವುದಿಲ್ಲ. ಯಶಸ್ವಿಯಾಗುವುದಕ್ಕೂ ಸಾಧ್ಯವಿಲ್ಲ. ಪಕ್ಷಬೇಧ ಎಣಿಸದೆ ಪರಿಷತ್‌ನ ಬೆಳವಣಿಗೆಗೆ ಶ್ರಮಿಸಿದವರನ್ನು ಒಗ್ಗೂಡಿಸಿಕೊಂಡು ಮುನ್ನಡೆಸಿದಾಗ ಮಾತ್ರ ಸಮ್ಮೇಳನ ಯಶಸ್ಸು ಕಾಣುವುದಕ್ಕೆ ಸಾಧ್ಯ. ಆದರೆ, ಸಮ್ಮೇಳನದ ಕಾರ್ಯಚಟುವಟಿಕೆಗಳಲ್ಲಿ ರಾಜಕೀಯ ಮೇಲಾಟ ದಿನೇ ದಿನೇ ಹೆಚ್ಚಾಗುತ್ತಿರುವುದು ಆತಂಕವನ್ನು ಸೃಷ್ಟಿಸುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಸಿ.ಕೆ.ರವಿಕುಮಾರ ವಿರೋಧಿ ಗುಂಪು ಪ್ರಭಾವ:

ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಸಿ.ಕೆ.ರವಿಕುಮಾರ ನಿಧನರಾದ ಬಳಿಕ ಸಮ್ಮೇಳನದ ಕಾರ್ಯಚಟುವಟಿಕೆಗಳಲ್ಲಿ ಸಿ.ಕೆ.ರವಿಕುಮಾರ ವಿರೋಧಿ ಗುಂಪು ಸಕ್ರಿಯವಾಗಲಾರಂಭಿಸಿದೆ. ಇದರೊಂದಿಗೆ ಮಾಜಿ ಅಧ್ಯಕ್ಷರೂ ಸೇರಿದಂತೆ ಪ್ರಭಾವಿ ಸಾಹಿತಿಗಳು ಸಮ್ಮೇಳನದ ಆಯಕಟ್ಟಿನ ಜಾಗಗಳಲ್ಲಿ ಕೂರುವುದಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ರಾಜಕೀಯ ನಾಯಕರ ಮೂಲಕ ಒತ್ತಡವನ್ನು ತರುತ್ತಿದ್ದಾರೆ. ಸಚಿವರು, ಶಾಸಕರು ಸೂಚಿಸಿದವರನ್ನು ಸೇರಿಸಿಕೊಳ್ಳಲಾಗುವುದಿಲ್ಲ ಎಂದು ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಹೇಳಲಾಗುವುದಿಲ್ಲ. ಸರ್ಕಾರದೊಂದಿಗೆ ಸಮನ್ವಯತೆಯನ್ನು ಕಾಯ್ದುಕೊಂಡು ಸಮ್ಮೇಳನ ಯಶಸ್ವಿಗೊಳಿಸುವುದು ಅಧ್ಯಕ್ಷರ ಜವಾಬ್ದಾರಿ. ಹಾಗಾಗಿ ರಾಜಕೀಯ ನಾಯಕರು ಸೂಚಿಸಿದವರನ್ನು ಸಮಿತಿಯೊಳಗೆ ಕರೆದುಕೊಳ್ಳುವುದು ಅನಿವಾರ್ಯವಾಗಿದೆ.

ಕಾರ್ಯಕಾರಿ ಸಮಿತಿಯವರು ದೂರ:

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯವರನ್ನು ಇನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂಬ ಅಸಮಾಧಾನ, ಅತೃಪ್ತಿ ಇದೆ. ಅವರನ್ನು ದೂರವಿಟ್ಟೇ ಸಮಿತಿಗಳನ್ನು ರಚಿಸಲಾಗುತ್ತಿದೆ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾಗಿರುವುದರಿಂದ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವರೆಂಬ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಬೆಳವಣಿಗೆಗಳನ್ನು ಕಾದುನೋಡುತ್ತಿದ್ದಾರೆ. ಪರಿಷತ್ತಿನೊಳಗೆ ರಾಜಕೀಯ ನುಸುಳಿರುವುದು, ಹಲವರ ಬದಲಾವಣೆ ಮಾಡಿರುವುದನ್ನು ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಗಮನಕ್ಕೆ ತಂದರೂ ಅವರು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.