ಸಾರಾಂಶ
ತಾಲೂಕಿನ ಸಂಪಿಗೆಯ ಶ್ರೀನಿವಾಸ ಸ್ವಾಮಿ ದೇವಾಲಯ, ಮುನಿಯೂರಿನ ಶ್ರೀ ರಂಗನಾಥ ಸ್ವಾಮಿ ದೇವಾಲಯ, ಗೊಟ್ಟೀಕೆರೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ತಾವರೆಕೆರೆಯ ತಿರುಮಲ ವೆಂಕಟೇಶ್ವರ (ತೋಪಿ ರಾಯ) ದೇವಾಲಯ, ಪಟ್ಟಣದ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಸಂಪಿಗೆಯ ಶ್ರೀನಿವಾಸ ಸ್ವಾಮಿ ದೇವಾಲಯ, ಮುನಿಯೂರಿನ ಶ್ರೀ ರಂಗನಾಥ ಸ್ವಾಮಿ ದೇವಾಲಯ, ಗೊಟ್ಟೀಕೆರೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ತಾವರೆಕೆರೆಯ ತಿರುಮಲ ವೆಂಕಟೇಶ್ವರ (ತೋಪಿ ರಾಯ) ದೇವಾಲಯ, ಪಟ್ಟಣದ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಯಿತು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜಾ ಕೈಂಕರ್ಯಗಳಲ್ಲಿ ತೊಡಗಿಕೊಂಡರು. ದೇವರಿಗೆ ಅಭಿಷೇಕ ಮಹಾಮಂಗಳಾರತಿ ಕಾರ್ಯ ನಡೆಯಿತು. ಸಂಪಿಗೆಯ ಪ್ರಸಿದ್ಧ ಶ್ರೀನಿವಾಸ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಸಾಲು ಸಾಲಾಗಿ ನೂರಾರು ಭಕ್ತಾದಿಗಳು ದೇವರ ದರ್ಶನಕ್ಕೆ ನಿಂತಿದ್ದರು. ಬಂದಂತಹ ಭಕ್ತರಿಗೆ ಬೃಹತ್ ಶಾಮಿಯಾನ ಹಾಕಿ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗೋವುಗಳನ್ನು ಪ್ರವೇಶ ಮಾಡಿಸುವ ಮೂಲಕ ವೈಕುಂಠ ದ್ವಾರವನ್ನು ತೆರೆಯಲಾಯಿತು. ರಾತ್ರಿ ವೇಳೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಸಂಪಿಗೆ ಶ್ರೀನಿವಾಸ ದೇವಾಲಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ಲಘು ಉಪಾಹಾರ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ರೂಪವಾಗಿ ಲಾಡನ್ನು ವಿತರಿಸಲಾಯಿತು.