ಸಾರಾಂಶ
ಬೆಂಗಳೂರು : ವಸಂತನಗರದ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತ್ವರಿತವಾಗಿ ಉಚಿತ ಡಯಾಲಿಸಿಸ್ ಸೆಂಟರ್ ಪ್ರಾರಂಭಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಪೂರ್ವ ವಲಯದ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆಂದು ಸ್ಥಾಪಿಸಿರುವ ಕಟ್ಟಡದಲ್ಲಿ ಇನ್ನೂ ಡಯಾಲಿಸಿಸ್ ಸೆಂಟರ್ ಏಕೆ ಆರಂಭಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸರ್ಕಾರಿ ಉಚಿತ ಡಯಾಲಿಸಿಸ್ ಸೇವೆ ಯೋಜನೆಯಡಿ, ಡಯಾಲಿಸಿಸ್ ಸೇವೆ ಪ್ರಾರಂಭಿಸಬೇಕು. ಇದರಿಂದ ಸುತ್ತಮುತ್ತಲಿನ ಬಡವರಿಗೆ ಅನುಕೂಲವಾಗಲಿದೆ. ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಿಕೊಂಡು ತ್ವರಿತಗತಿಯಲ್ಲಿ ಕೇಂದ್ರವನ್ನು ಪ್ರಾರಂಭಿಸಬೇಕೆಂದು ನಿರ್ದೇಶಿಸಿದರು.
ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕೇಂದ್ರದ ಕಾರ್ಯವೈಖರಿಯನ್ನು ಪರಿಶೀಲಿಸಿ, ಪ್ರತಿನಿತ್ಯ ಎಷ್ಟು ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ, ಎಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿ ಪಡೆದರು.
ಫೀವರ್ ಕ್ಲಿನಿಕ್‌ಗೆ ಉದ್ಘಾಟನೆ
ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಸ್ಥಾಪಿಸಿರುವ ಫೀವರ್ ಕ್ಲಿನಿಕ್‌ಗೆ ಚಾಲನೆ ನೀಡಲಾಯಿತು. ಹೆಚ್ಚಿನ ಡೆಂಘೀ ಪ್ರಕರಣ ಕಂಡು ಬರುವ ಕಡೆ ಫೀವರ್ ಕ್ಲಿನಿಕ್‌ಗಳನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಸೂಚಿಸಿದರು
.2+ ಡೆಂಘೀ ಪತ್ತೆ ಆದರೆ ಹಾಟ್‌ಸ್ಪಾಟ್ ಗುರುತು
ನಗರದಲ್ಲಿ 100 ಚದರ ಮೀಟರ್ ವ್ಯಾಪ್ತಿಯಲ್ಲಿ 2ಕ್ಕಿಂತ ಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬಂದರೆ ಅದನ್ನು ಹಾಟ್ ಸ್ಪಾಟ್ ಎಂದು ಗುರುತಿಸಬೇಕು. ಜತೆಗೆ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಫೀವರ್ ಪರೀಕ್ಷೆ, ಲಾರ್ವಾ ಸರ್ವೆ, ಫಾಗಿಂಗ್, ಸ್ಪ್ರೇ ಹಾಗೂ ಡೆಂಘೀ ಹರಡದಂತೆ ಮುಂಜಾಗ್ರತಾ ವಹಿಸಲು ಬಿತ್ತಿ ಪತ್ರಗಳನ್ನು ವಿತರಿಸಿ ಅರಿವು ಮೂಡಿಸಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಈ ವೇಳೆ ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್, ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ಡಾ। ನವೀನ್ ಭಟ್, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ। ಸೈಯದ್ ಸಿರಾಜುದ್ದೀನ್ ಮದನಿ, ಡಾ। ನಿರ್ಮಲಾ ಬುಗ್ಗಿ, ಪಶ್ವಿಮ ವಲಯ ಆರೋಗ್ಯಾಧಿಕಾರಿ ಡಾ। ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.