ಲಂಬೋದರನ ಸ್ವಾಗತಕ್ಕೆ ಸಜ್ಜಾದ ಅಥಣಿ

| Published : Sep 07 2024, 01:33 AM IST

ಸಾರಾಂಶ

ಅಥಣಿ ಪಟ್ಟಣದಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶನ ಮೂರ್ತಿ ತಯಾರಿಸುವ ವಿಶ್ವಕರ್ಮ ಕುಟುಂಬಗಳ ಕಲಾವಿದರು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುವ ಕಾಯಕದಲ್ಲಿ ನಿರತರಾಗಿದ್ದರು.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶನ ಮೂರ್ತಿ ತಯಾರಿಸುವ ವಿಶ್ವಕರ್ಮ ಕುಟುಂಬಗಳ ಕಲಾವಿದರು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುವ ಕಾಯಕದಲ್ಲಿ ನಿರತರಾಗಿದ್ದರು. ಮಾರುಕಟ್ಟೆಯಲ್ಲಿ ಗಣೇಶ ಮಂಟಪದ ಅಲಂಕಾರಕ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.

ಪಿಒಪಿ ಮೂರ್ತಿಗಳದ್ದೇ ದರ್ಬಾರ್‌ : ಪಟ್ಟಣದ ವಿಶ್ವಕರ್ಮ ಕುಟುಂಬದ ಅನೇಕ ಕಲಾವಿದರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಆದರೆ ಆಕರ್ಷಣೆ, ಆಡಂಬರಕ್ಕೆ ಮಾರು ಹೋಗಿ ಬ್ಯಾನ್‌ ಆಗಿರುವ ಪಿಒಪಿ ಗಣೇಶನನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಪಿಒಪಿ ಗಣೇಶಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಸಾರ್ವಜನಿಕರು ಅವುಗಳತ್ತಲೇ ಆಕರ್ಷಿತರಾಗುತ್ತಿದ್ದಾರೆ. ನೂರಾರು ಗಣೇಶ ಮೂರ್ತಿ ಪ್ರತಿಷ್ಠಾಪಕರು, ಸಮಿತಿಗಳು ಸಾರ್ವಜನಿಕ ಗಣೇಶೋತ್ಸವ ಸಮಾರಂಭಗಳಲ್ಲಿ ಜನರನ್ನು ಆಕರ್ಷಿಸಲು ಬಣ್ಣ-ಬಣ್ಣದ ಪಿಒಪಿ ಗಣೇಶ ಮೂರ್ತಿ ನೋಂದಣಿ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ತಾಲೂಕು ಆಡಳಿತ ಮೌನ ವಹಿಸಿದೆ.

ಹಣ್ಣುಗಳ ದರ ದುಬಾರಿ :

ಗಣೇಶ ಹಬ್ಬದ ನಿಮಿತ್ತ ಅಥಣಿ ಮಾರುಕಟ್ಟೆಯಲ್ಲಿ ಬಾಳೆಹಣ್ಣು, ಸೇಬು, ಸೀಬೆ, ಮೋಸಂಬಿ, ಸಂತ್ರಾ ಸೇರಿದಂತೆ ಇತರ ಹಣ್ಣುಗಳ ಮತ್ತು ತರಕಾರಿ ದರ ಮೂರು ಪಟ್ಟು ಅಧಿಕವಾಗಿದೆ. ಡಜನ್‌ಗೆ ₹50ಕ್ಕೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಏಕಾಏಕಿ ಡಜನ್‌ಗೆ ₹100-200ಕ್ಕೆ ಏರಿಕೆಯಾಗಿದೆ. ಕೆಜಿಗೆ ₹200 ಇದ್ದ ಸೇಬು ದರ ₹400-600ಕ್ಕೇರಿದೆ. ಅಲಂಕಾರಿಕ ವಸ್ತುಗಳು, ಬಣ್ಣ ಬಣ್ಣದ ಲೈಟಿಂಗ್‌ ಸರಗಳು, ಪಟಾಕಿ ಮತ್ತು ಸಿಡಿಮದ್ದುಗಳು, ಮಕ್ಕಳ ಆಟಿಕೆಯ ವಸ್ತುಗಳ ದರದಲ್ಲಿ ಭಾರೀ ಏರಿಕೆಯಾಗಿದ್ದು, ಗ್ರಾಹಕರಿಗೆ ಹಬ್ಬದ ಬಿಸಿ ತಟ್ಟಿದೆ.ಕಳೆದ 5 ವರ್ಷಗಳಿಂದ ಸರ್ಕಾರ ಪಿಒಪಿ ಮೂರ್ತಿ ನಿಷೇಧಿಸಿದ್ದರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಡಿಕೆಗೆ ತಕ್ಕಂತೆ ಪರಿಸರ ಸ್ನೇಹಿ ಗಣೇಶನ ಮೂರ್ತಿ ಸಿದ್ಧಪಡಿಸುತ್ತೇವೆ. ವಂಶಪಾರಂಪರ್ಯವಾಗಿ ನಮ್ಮ ಕುಟುಂಬಗಳು ಗಣೇಶನ ಮೂರ್ತಿ ತಯಾರಿ ವೃತ್ತಿಯನ್ನಾಗಿಸಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಮಣ್ಣು ತಂದು, ಹದ ಮಾಡಿ ಕುಟುಂಬದವರೆಲ್ಲರೂ ಸೇರಿ ಮೂರ್ತಿ ತಯಾರಿಸುತ್ತೇವೆ. ಆದರೆ, ಮಾರುಕಟ್ಟೆಯಲ್ಲಿ ಪಿಒಪಿ ಮೂರ್ತಿಗಳ ಮಾರಾಟ ಅಧಿಕವಾಗಿದೆ. ಇದರಿಂದ ಕೆಲವು ವೇಳೆ ನಾವು ಕಷ್ಟಪಟ್ಟು ತಯಾರಿಸಿದ ಮಣ್ಣಿನ ಮೂರ್ತಿಗಳು ಮಾರಾಟವಾಗದೆ ನಷ್ಟ ಅನುಭವಿಸುವಂತಾಗುತ್ತದೆ.

ಮೌನೇಶ ಪತ್ತಾರ , ಮೂರ್ತಿ ತಯಾಕರ