ಕಾಪುನ ಶಿರ್ವದ ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ಶ್ರೀದುರ್ಗಾ ಮಹಿಳಾ ವೃಂದದ ನೇತೃತ್ವದಲ್ಲಿ ಭಾನುವಾರ ‘ಅಥರ್ವ ಶೀರ್ಷ ಗಣಯಾಗ’ ಜರುಗಿತು.

ಕಾಪು: ಇಲ್ಲಿನ ಶಿರ್ವದ ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ಶ್ರೀದುರ್ಗಾ ಮಹಿಳಾ ವೃಂದದ ನೇತೃತ್ವದಲ್ಲಿ ಭಾನುವಾರ ‘ಅಥರ್ವ ಶೀರ್ಷ ಗಣಯಾಗ’ ಜರುಗಿತು. ಕ್ಷೇತ್ರದ ವೈದಿಕರಾದ ವೇದಮೂರ್ತಿ ಸಂದೇಶ್ ಭಟ್ ನೇತೃತ್ವದಲ್ಲಿ ಸಹವೈದಿಕರಾದ ನರೇಶ್ ಭಟ್, ಮಂಜುನಾಥ ಭಟ್, ರವಿಚಂದ್ರ ಭಟ್ ಸಡಂಬೈಲು, ರವೀಶ್ ಭಟ್ ಸಗ್ರಿ, ಶ್ರೀಶಾಂತ್ ಭಟ್ ಹಿರಿಯಡ್ಕ, ಮಂಜುನಾಥ ಭಟ್ ಪಳ್ಳಿ ಅವರ ಸಹಭಾಗಿತ್ವದಲ್ಲಿ ಗಣಯಾಗದ ವಿವಿಧ ಧಾರ್ಮಿಕ ಅನುಷ್ಠಾನಗಳು ಸಂಪನ್ನಗೊಂಡವು. ಪೂಜಾನುಷ್ಠಾನದಲ್ಲಿ ಮಹಿಳಾ ವೃಂದದ ಅಧ್ಯಕ್ಷೆ ಸುನೀತಾ-ದೇವೇಂದ್ರ ನಾಯಕ್ ದಂಪತಿ ನೇತೃತ್ವ ವಹಿಸಿದ್ದರು. ಮಹಿಳಾ ವೃಂದದವರಿಂದ ಸಾಮೂಹಿಕ ಭಜನೆ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಆಡಳಿತ ಮಂಡಳಿ ಸದಸ್ಯರು, ಹಿರಿಯ ಜ್ಯೋತಿಷಿಗಳಾದ ಮಾಣ್ಯೂರು ಉಪೇಂದ್ರ ಪ್ರಭು, ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್. ಪಾಟ್ಕರ್, ಶ್ರೀ ದುರ್ಗಾ ಮಹಿಳಾ ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ಲು, ಕ್ಷೇತ್ರದ ಭಗವದ್ಭಕ್ತರು ಪಾಲ್ಗೊಂಡಿದ್ದರು. ಯಾಗದ ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.