ಉಡುಪಿ: ಕರಾವಳಿಯ ಸುಪ್ರಸಿದ್ಧ ಯಕ್ಷಗಾನ ಪ್ರಸಂಗ ದೇವಿಮಹಾತ್ಮೆಯು ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ, ಅದೂ ದೂರದ ಗ್ರೀಕ್ ದೇಶದಲ್ಲಿ ಮಾತ್ರವಲ್ಲ, ಈ ಸಿನೆಮಾವನ್ನು ಗ್ರೀಸ್ ಸರ್ಕಾರವೇ ೧೫೦ ಕೋಟಿ ರು. ಅನುದಾನ ನೀಡಿ ನಿರ್ಮಿಸುತ್ತಿದೆ.

ಈ ಸಿನಿಮಾದ ಚಿತ್ರೀಕರಣಕ್ಕೆ ಸೋಮವಾರ ಗ್ರೀಸ್ ದೇಶದ ಪೌರಾಣಿಕ ನಗರ ಅಥೆನ್ಸ್ ನಲ್ಲಿ ವಿಶ್ವಗುರು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮುಹೂರ್ತ ನೆರವೇರಿಸಿದರು.ನಂತರ, ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ, ಧರ್ಮಗಳನ್ನು ಬೆಳೆಸುವ ಮತ್ತು ಪಸರಿಸುವ ಹಿನ್ನೆಯಲ್ಲಿ ದೇವಿ ಮಹಾತ್ಮೆ ಸಿನಿಮಾ ನಿರ್ಮಿಸಲಾಗುತ್ತಿದೆ. ಜಗತ್ತಿನಲ್ಲಿ ದುಷ್ಟ ಶಕ್ತಿಗಳು ಸಂಹಾರವಾಗಿ, ಸತ್ ಶಕ್ತಿಗಳು ವಿಸ್ತರಣೆಯಾಗಬೇಕು ಎಂಬುದು ಈ ಸಂಕಲ್ಪವಾಗಿದೆ ಎಂದು ನುಡಿದರು.ಗ್ರೀಸ್ ದೇಶದಲ್ಲಿ ನೆಲೆಸಿರುವ ಮುಂಬೈ ಮೂಲದ ಮನು ಕುಮಾರ್ ಈ ದೇವಿ ಮಹಾತ್ಮೆ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಿಸುತಿದ್ದಾರೆ. ಅರ್ನಾಬ್ ಭವೇಜಾ ಸಹ ನಿರ್ಮಾಪಕ ಹಾಗೂ ಶಶಾಂಕ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಸಿನೆಮಾದಲ್ಲಿ ಗ್ರೀಸ್ ದೇಶದ ಸರ್ಕಾರ 150 ಕೋಟಿ ರು., ಹೂಡಿಕೆಗೆ ಮುಂದೆ ಬಂದಿದೆ.ಇದೇ ಸಂದರ್ಭದಲ್ಲಿ ಈ ಸಂದರ್ಭ ಭಾರತ ಹಾಗೂ ಪೌರ್ವಾತ್ಯ, ಪಾಶ್ಚಾತ್ಯ ತತ್ವಜ್ಞಾನಿಗಳ ಸಮ್ಮೇಳನಕ್ಕೂ ಪುತ್ತಿಗೆ ಶ್ರೀಗಳು ಚಾಲನೆ ನೀಡಿದರು. ಬೊಚಸನ್ ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸಂಸ್ಥೆಯ ಶ್ರೀ ಭದ್ರೇಶ್ ದಾಸ್ ಸ್ವಾಮೀಜಿ, ಶ್ರೀಶೈಲದ ಚೆನ್ನಸಿದ್ಧರಾಮ ಸ್ವಾಮೀಜಿ, ಖ್ಯಾತ ಗ್ರೀಕ್ ನಟ ಅಂತಿಮೋಸ್ ಅನನಿಯದಾಸ್, ಗ್ರೀಸ್ ದೇಶದಲ್ಲಿ ಭಾರತೀಯ ರಾಯಭಾರ ಕಚೇರಿಯ ಬಾಲ್ಜಿ ನಾಗರಥ್ ಉಪಸ್ಥಿತರಿದ್ದರು.

ಗ್ರೀಕ್ ಗಣ್ಯರಿಗೆ ಕೋಟಿ ಗೀತಾ ದೀಕ್ಷೆ: ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರೀಕ್ ದೇಶದ ಗಣ್ಯರು, ಪ್ರಜೆಗಳಿಗೆ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿದರು. ಅಹಂಕಾರದ ಮೇಲೆ ಸದಾಚಾರ, ಅನ್ಯಾಯದ ಮೇಲೆ ಧರ್ಮ, ಯುದ್ಧದ ಮೇಲೆ ಶಾಂತಿಯ ಗೆಲುವಾಗಬೇಕು. ಈ ನಿಟ್ಟಿನಲ್ಲಿ ಕೋಟಿ ಗೀತಾ ಲೇಖನ ಸಂಕಲ್ಪ ಕೈಗೊಂಡಿದ್ದು, ಅದರ ಸಮರ್ಪಣೆಯನ್ನು 2028ರ ಡಿಸೆಂಬರ್ ತನಕ ವಿಸ್ತರಿಸಲಾಗಿದೆ ಎಂದು ಶ್ರೀಗಳು ಹೇಳಿದರು.