ತಲಕಾವೇರಿ ಸನ್ನಿಧಿಯಲ್ಲಿ ಅತಿರುದ್ರ ಜಪಯಜ್ಞ ಆರಂಭ

| Published : May 11 2025, 11:51 PM IST

ಸಾರಾಂಶ

ಅತಿರುದ್ರ ಜಪಯಜ್ಞ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಸನ್ನಿಧಿಯಲ್ಲಿ ಆರಂಭಗೊಂಡಿತು. ಸಹಸ್ರ ಮೋದಕಗಳಿಂದ ಶ್ರೀ ಮಹಾಗಣಪತಿ ಹೋಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಲೋಕಕಲ್ಯಾಣಾರ್ಥವಾಗಿ 11 ದಿನಗಳ ಕಾಲ ನಡೆಯುವ ಅತಿರುದ್ರ ಜಪಯಜ್ಞ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಸನ್ನಿಧಿಯಲ್ಲಿ ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಪ್ರಶಾಂತ್ ಆಚಾರ್ಯ ಅವರ ನೇತೃತ್ವದಲ್ಲಿ ಆರಂಭಗೊಂಡಿತು. ಅರುಣೋದಯದ ಸಮಯದಲ್ಲಿ ಸಹಸ್ರ ಮೋದಕಗಳಿಂದ ಶ್ರೀ ಮಹಾಗಣಪತಿ ಹೋಮ ನೆರವೇರಿತು. ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಅವರು ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಫಲತಾಂಬೂಲದೊಂದಿಗೆ, ಶ್ರೀಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜ್ ಅವರ ಸಂಕಲ್ಪದಂತೆ ಅತಿರುದ್ರ ಜಪಯಜ್ಞದ ಯಶಸ್ಸಿಗಾಗಿ ಪ್ರಾರ್ಥಿಸಿದರು.ಶ್ರೀ ರುದ್ರ ದೇವರ ಕೃಪಾಶೀರ್ವಾದವು ಲೋಕಕ್ಕೆ ಲಭಿಸಲಿ, ಪ್ರಸ್ತುತ ಎದುರಾಗಿರುವ ಭಾರತ ಮತ್ತು ಪಾಕಿಸ್ತಾನ ಬಿಕ್ಕಟ್ಟು ಶಾಂತವಾಗಲಿ. ಉಗ್ರರಿಂದ ಹತ್ಯೆಗೊಳಗಾದವರಿಗೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರು.ಜಪಯಜ್ಞ ಸಮಿತಿಯ ಗೌರವಾಧ್ಯಕ್ಷ ಮಿತ್ತೂರು ಈಶ್ವರ ಭಟ್ ಅವರು ಮಾತನಾಡಿ, ಈ ಜಪಯಜ್ಞವು ಮುಂದಿನ ಮೇ 21 ರವರೆಗೆ ನಡೆಯಲಿದೆ. ಮೇ 19 ರಂದು ಮಡಿಕೇರಿಯ ಲಕ್ಷ್ಮಿನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ ಹಾಗೂ ಮೇ 21 ರಂದು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇಗುಲದಲ್ಲಿ ಶ್ರೀ ಚಂಡಿಕಾ ಹೋಮ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು.ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಹೊಳ್ಳ ಅವರು ಮಾತನಾಡಿ ರುದ್ರಜಪಯಜ್ಞವು ತಲಕಾವೇರಿಯ ಶ್ರೀ ಕೈಲಾಸ ಆಶ್ರಮದಲ್ಲಿ ನಡೆಯಲಿದ್ದು, ಸರ್ವರು ಸಹಕರಿಸುವಂತೆ ಕೋರಿದರು.ಸಮಿತಿಯ ಸಂಚಾಲಕ ಉದಯಕುಮಾರ್, ಪ್ರಮುಖರಾದ ಸಂಪತ್ ಕುಮಾರ್, ಬಿ.ಸಿ.ದಿನೇಶ್, ಪ್ರಧಾನ ಅರ್ಚಕ ಗುರುರಾಜ್ ಆಚಾರ್, ರವಿ ರಾಮಾನುಜಮ್, ಮತ್ತಿತರರು ಹಾಜರಿದ್ದರು.