ಕನ್ನಡಪ್ರಭವಾರ್ತೆ ನಾಪೋಕ್ಲು
ಹಾಕಿ ಶಿಬಿರದಲ್ಲಿ ಪಾಲ್ಗೊಳ್ಳುವುದಷ್ಟೇ ಮುಖ್ಯವಲ್ಲ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಕೂಡ ಅಗತ್ಯ ಎಂದು ಹಾಕಿ ಕರ್ನಾಟಕ ತರಬೇತುದಾರ ಹಾಗೂ ಬ್ಯಾಂಕ್ ಉದ್ಯೋಗಿ ಕಾಂಡಂಡ ಅಪ್ಪಣ್ಣ ಹೇಳಿದರು. ನಾಪೋಕ್ಲು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ 26ನೇ ವರ್ಷದ ಹಾಕಿ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಶಿಸ್ತು ಹಾಗೂ ವಿನಯದಿಂದ ವರ್ತಿಸುವಂತೆ ಹಾಗೂ ತರಬೇತಿಯ ಸಂದರ್ಭ ಏಕಾಗ್ರತೆಯಿಂದ ತರಬೇತಿದಾರರು ಹೇಳುವುದನ್ನು ಪಾಲಿಸಿಕೊಂಡು ಬರುವಂತೆ ಮಕ್ಕಳಿಗೆ ತಿಳಿಹೇಳಿದರು.ವಿದ್ಯಾರ್ಥಿಗಳು ರಜಾ ಅವಧಿ ಸದುಪಯೋಗಪಡಿಸಿಕೊಳ್ಳಬೇಕು. ಶಿಬಿರದಲ್ಲಿ ಪಾಲ್ಗೊಂಡು ಒತ್ತಡಕ್ಕೆ ಒಳಗಾಗಬಾರದು. ಸಂತೋಷದಿಂದ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕೂಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ ಇದೇ ಮೈದಾನದಲ್ಲಿ ಆಟವಾಡಿದ, ತರಬೇತಿ ಹೊಂದಿದ ಹಲವು ಕ್ರೀಡಾಪಟುಗಳು ಉನ್ನತ ಸ್ಥಾನದಲ್ಲಿದ್ದಾರೆ. ಹಿಂದೆ ಪ್ರತಿಭೆ ಗುರುತಿಸುವ ಕೆಲಸ ಆಗುತ್ತಿರಲಿಲ್ಲ. ಈಗ ಸಂಘ ಸಂಸ್ಥೆಗಳು ವಿವಿಧ ಕ್ರೀಡೆಗಳ ತರಬೇತಿಯನ್ನು ನೀಡುತ್ತಿವೆ. ಹಾಕಿ, ಕ್ರಿಕೆಟ್, ಅಥ್ಲೆಟಿಕ್ಸ್ ಯಾವುದೇ ವಿಭಾಗದಲ್ಲಿ ಗುರಿ ಇರಿಸಿ ಕ್ರೀಡಾ ಕ್ಷೇತ್ರದ ಮುಂದೆ ಬರಬೇಕು. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಇಲ್ಲಿ ಕಲಿತವರಿಂದ ಸಾಧನೆ: ಫೀಲ್ಡ್ ಮಾರ್ಷಲ್ ಕ್ರೀಡಾ ಅಕಾಡೆಮಿಯ ಅಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ, ಅಕಾಡೆಮಿ ಸ್ಥಾಪಕ ಅಧ್ಯಕ್ಷ ದಿವಂಗತ ಕಲಿಯಂಡ ಸಾಬು ಅಯ್ಯಣ್ಣ ಅವರ ಅವಿರತ ಶ್ರಮದಿಂದ ಸ್ಥಾಪನೆಗೊಂಡ ಈ ಅಕಾಡೆಮಿ 26 ವಸಂತಗಳನ್ನು ಕಂಡಿದ್ದು ಇಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸ್ಥಾನಮಾನಗಳನ್ನು ಪಡೆದಿದ್ದಾರೆ ಎಂದರು. ಹಾಕಿ ತರಬೇತಿ ಒಂದನ್ನೇ ದೃಷ್ಟಿಯಲ್ಲಿರಿಸಿಕೊಂಡು ಶಿಬಿರಕ್ಕೆ ಬರಬಾರದು. ವಿದ್ಯಾರ್ಥಿಗಳು ಆಸಕ್ತಿ ಇರುವ ಯಾವುದೇ ಕ್ರೀಡೆಯಲ್ಲಿ ಪರಿಣತಿ ಹೊಂದಬೇಕು ಎಂದರು.ಅಕಾಡೆಮಿಯ ಉಪಾಧ್ಯಕ್ಷ ಕೊಂಡಿರ ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ಮೇಲ್ಮಟ್ಟದ ಗುರಿಯಿರಿಸಿ ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಗುರಿ ಇರಿಸಿಕೊಂಡು ಅಭ್ಯಾಸ ಮಾಡಬೇಕು ಎಂದರು. ದಂತ ವೈದ್ಯ ಕ್ಯಾಲೇಟೀರ ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರೀಡಾ ಅಕಾಡೆಮಿ ಖಜಾಂಚಿ ಮತ್ತು ಮುಖ್ಯ ತರಬೇತುದಾರ ಮಾಜಿ ಸೈನಿಕ ಕೂಟೋಳಿರ ಡಾಲಿ ಅಚ್ಚಪ್ಪ, ಹಿರಿಯ ನಿರ್ದೇಶಕ ದುಗ್ಗಳ ಸದಾನಂದ. ಕುಂಚೆಟೀರ ಸುದೀ ಉತ್ತಪ್ಪ ತರಬೇತುದಾರ ಅರೇಯಡ ಬೆಳ್ಳಿಯಪ್ಪ( ಗಣೇಶ) ಬಿದ್ದಾಟಂಡ ಮಮತಾ ಚಿನ್ನಪ್ಪ ಹಾಗೂ ಪೋಷಕರಾದ ಪಡಿಯಮಂಡ ಗಾಯತ್ರಿ, ಚೇರುವಾಳಂಡ ದೀನಾ, ಬೋಟೋಳಂಡ ವಿವೇಕ್ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಾಚೇಟ್ಟಿರ ಕುಶು ಕುಶಾಲಪ್ಪ ನಿರೂಪಿಸಿದರು.