ಬೆಳ್ತಂಗಡಿ: ಲೋಕದ ಜನಕಲ್ಯಾಣ, ಸಮಾಜಕ್ಕೆ ಅಧ್ಯಾತ್ಮ ಬೋಧನೆ, ಆತ್ಮಶಕ್ತಿ ಜಾಗೃತಿ, ಯುವ ಜನಾಂಗದಲ್ಲಿ ಸಂಸ್ಕಾರ ಮೂಡಿಸುವುದೇ ಚಾತುರ್ಮಾಸ್ಯ ವ್ರತಾಚರಣೆಯ ಮೂಲ ಉದ್ದೇಶ. ಈ ಮೂಲಕ ಅಧ್ಯಾತ್ಮ ಮೌಲ್ಯ ವರ್ಧನೆ, ಶಕ್ತಿಯ ಜಾಗೃತಿಯೊಂದಿಗೆ ಮನುಷ್ಯನ ಬೆಳವಣಿಗೆಗೆ ಸಂಸ್ಕಾರ ಬಿತ್ತರಿಸುವ ಕಾರ್ಯ ನಡೆಯಲಿದೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಭಾನುವಾರ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ತಮ್ಮ 7ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬೈಂದೂರು ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ನೇತೃತ್ವದಲ್ಲಿ ಜು. 29ರಿಂದ ಸೆ.14ರವರೆಗೆ ಬೈಂದೂರು ತಾಲೂಕಿನ ಗೋಳಿಹೊಳೆಯ ಶ್ರೀ ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀಗಳವರ ಚಾತುರ್ಮಾಸ್ಯ ವ್ರತಾಚರಣೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಪರಾಭವ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಜು. 29ರಂದು ಗುರುಪೂರ್ಣಿಮೆ ದಿನ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಳ್ಳಲಿದೆ. ಅಂದು ಬೆಳಗ್ಗೆ 10ಕ್ಕೆ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಶ್ರೀಗಳವರ ಪುರಪ್ರವೇಶ ಭವ್ಯ ಮೆರವಣಿಗೆ ಶ್ರೀ ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನ ತಲುಪಿ ಅಲ್ಲಿ 11.05ರ ಸುಮುಹೂರ್ತದಲ್ಲಿ ಶ್ರೀಗಳವರ ವ್ಯಾಸ ಪೀಠಾರೋಹಣ, ಗುರುಪಾದುಕಾ ಪೂಜೆ, ಶ್ರೀಗಳವರ ಆಶೀರ್ವಚನ, ಮಂತ್ರಾಕ್ಷತೆ ಅನುಗ್ರಹ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ ಭಜನೆ, ಗುರುಪಾದುಕಾ ಪೂಜೆ, ಆಶೀರ್ವಚನ ಹಾಗೂ ಅನ್ನಸಂತರಣೆ ನಡೆಯಲಿದೆ ಎಂದರು. ಹುಣ್ಣಿಮೆ, ಅಮಾವಾಸ್ಯೆ, ಏಕಾದಶಿಯಂದು ಶ್ರೀಗಳವರು ಮೌನ ವ್ರತದಲ್ಲಿರುವುದರಿಂದ ಅಂದು ಸೂರ್ಯಾಸ್ತದ ಬಳಿಕ ಗುರುಗಳ ದರ್ಶನ ಪಡೆಯಬಹುದು. ಶ್ರೀಗಳವರ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವವು ಸೆ. 3ರಂದು ಗೋಳಿಹೊಳೆ ಶ್ರೀ ವಿನಾಯಕ ದೇವಸ್ಥಾನದಲ್ಲೇ ವೈಭವದಿಂದ ನಡೆಯಲಿದೆ. ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕ್ಷೇತ್ರದ ಟ್ರಸ್ಟಿಗಳಾದ ಚಿತ್ತರಂಜನ್ ಗರೋಡಿ, ಪೀತಾಂಬರ ಹೆರಾಜೆ, ಚಂದ್ರ ಎಸ್.ಕೆ., ಎಚ್.ಆರ್. ನಾಯ್ಕ್ ಕುಮಟಾ, ವಿಜಯ ಕುಮಾರ್ ಸೊರಕೆ, ಚಿದಾನಂದ ಮೂರ್ತಿ, ರವಿದಾಸ್, ಕೆ ಎಂ ನಾಗೇಶ್ ಕುಮಾರ್, ಸಂಜೀವ ಪೂಜಾರಿ,ರಘುನಾಥ ಮಾಬೆನ್,ಕೇಶವ ಬಂಗೇರ, ಪ್ರಶಾಂತ್ ಎಂ., ಪುರುಷೋತ್ತಮ, ರಾಜೇಶ್ ಮೂಡುಕೋಡಿ, ಬೇಬಿ ಕುಂದರ್, ಯತೀಶ್ ಸುವರ್ಣ, ತುಕಾರಾಂ ಸಾಲ್ಯಾನ್, ಬಾಲಕೃಷ್ಣ ಶೆಟ್ಟಿ, ತಿಮ್ಮಪ್ಪ ಗೌಡ, ದೇವಿಪ್ರಸಾದ್, ಜಯಪ್ರಕಾಶ್, ಅನಿಲ್ ಕುಮಾರ್, ಲೋಕೇಶ್ ಶಾಂತಿ, ಮಹೇಶ್ ಶಾಂತಿ ಭಾಗವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ ಗೌರವಾಧ್ಯಕ್ಷತೆಯಲ್ಲಿ ಚಾತುರ್ಮಾಸ್ಯ ಸಮಿತಿ ಕಾರ್ಯ ನಿರ್ವಹಿಸುತ್ತಿದೆ.