ಸರ್ಕಾರವೇ ಮತೀಯ ಶಕ್ತಿಗಳಿಗೆ ಧೈರ್ಯ ತುಂಬುತ್ತಿದೆ. ಇದರ ಮಧ್ಯೆ ರಾಜ್ಯ ಸರ್ಕಾರ ಕಾಯಂ ನಿವಾಸಿ ಪತ್ರ ನೀಡುತ್ತಿರುವುದು ಖಂಡನಾರ್ಹ. ಈ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಗದಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮತೀಯ ಶಕ್ತಿಗಳಿಗೆ ಸ್ವರ್ಗದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊಲೆ, ದೌರ್ಜನ್ಯಗಳು ನಡೆದರೂ ಕಾಂಗ್ರೆಸ್ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ. ಇತ್ತೀಚೆಗೆ ಹಾವೇರಿಯಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ರಟ್ಟಿಹಳ್ಳಿಯಲ್ಲಿ ಶಿವಾಜಿ ರಾವ್ ಹತ್ಯೆ, ಯಲ್ಲಾಪುರದಲ್ಲಿ ದಲಿತ ಮಹಿಳೆಯ ಕೊಲೆ ಹಾಗೂ ಕೊಪ್ಪಳದಲ್ಲಿ ಗವಿಸಿದ್ಧಪ್ಪನ ಪೋಕ್ಸೋ ಪ್ರಕರಣಗಳನ್ನು ನೋಡುತ್ತಿದ್ದೇವೆ. ಸರ್ಕಾರವೇ ಮತೀಯ ಶಕ್ತಿಗಳಿಗೆ ಧೈರ್ಯ ತುಂಬುತ್ತಿದೆ. ಇದರ ಮಧ್ಯೆ ರಾಜ್ಯ ಸರ್ಕಾರ ಕಾಯಂ ನಿವಾಸಿ ಪತ್ರ ನೀಡುತ್ತಿರುವುದು ಖಂಡನಾರ್ಹ. ಈ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ರಿಪೇರಿ ಮಾಡಲು ಸರ್ಕಾರಕ್ಕೆ 24 ತಿಂಗಳು ಬೇಕಾಯಿತು. ಆದರೆ ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲೇ ಬಿಡದಿಯ ಫಲವತ್ತಾದ ರೈತರ ಜಮೀನನ್ನು ಕಿತ್ತುಕೊಳ್ಳುವ ದುಸ್ಸಾಹಸಕ್ಕೆ ಡಿಕೆಶಿ ನೇತೃತ್ವದ ಸರ್ಕಾರ ಕೈಹಾಕಿದೆ. ರೈತರಿಂದ ಬಲವಂತವಾಗಿ ಜಮೀನು ಕಸಿಯುವುದಿಲ್ಲ ಎಂದು ಸಿಎಂ ಕಪಟ ನಾಟಕವಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ರಾತ್ರಿ ವೇಳೆ ಗೂಂಡಾಗಳು ರೈತರ ಮನೆಗೆ ಬಂದು ಜಮೀನು ಬಿಟ್ಟುಕೊಡುವಂತೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಯಾದ ಮೇಲೂ ಡಿ.ಕೆ. ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ಧೋರಣೆಯಿಂದ ಹೊರಬಂದಿಲ್ಲ. ಸಿಎಂ ಬಂಧು-ಬಳಗವೇ ಬಿಡದಿಯಲ್ಲಿ ಸಾವಿರಾರು ಎಕರೆ ಜಮೀನು ಹೊಂದಿದೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರ ಕಾಲದ ನೆಪ ಒಡ್ಡಿ ಸಣ್ಣ ರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ. ರೈತರ ಶಾಪಕ್ಕೆ ಸರ್ಕಾರ ಬಲಿಯಾಗಲಿದೆ. ರಾಹುಲ್ ಗಾಂಧಿ ಅವರೂ ರೈತರ ಪರ ನಿಲುವು ತಳೆಯಬೇಕು. ಸರ್ಕಾರದ ಈ ನೀತಿ ಖಂಡಿಸಿ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಶರಣು ತಳ್ಳಿಕೇರಿ, ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜಗೌಡ ಪಾಟೀಲ, ಎಂ.ಎಂ. ಹಿರೇಮಠ ಸೇರಿದಂತೆ ಜಿಲ್ಲಾ ಬಿಜೆಪಿಯ ಹಿರಿ, ಕಿರಿಯ ಮುಖಂಡರು ಇದ್ದರು.