ಸಾರಾಂಶ
ಹಾನಗಲ್ಲ ತಾಲೂಕಿನಲ್ಲಿ ನೈತಿಕ ಪೊಲೀಸ್‌ಗಿರಿ ನೆಪದಲ್ಲಿ ಯಾರೇ ಆಗಲಿ ಕಾನೂನು ಮೀರುವಂತಿಲ್ಲ ಅಥವಾ ಯಾರಿಗೇ ತೊಂದರೆ ಕೊಡುವಂತಿಲ್ಲ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಾನಗಲ್ಲ: ನೈತಿಕ ಪೊಲೀಸ್‌ಗಿರಿ ನೆಪದಲ್ಲಿ ಹಲ್ಲೆ, ಅತ್ಯಾಚಾರ, ದೌರ್ಜನ್ಯದಂಥ ಪ್ರಕರಣಗಳು ಯಾವುದೇ ಕಾರಣಕ್ಕೂ ಮರುಕಳಿಸಬಾರದು. ಜನಸಾಮಾನ್ಯರ ಬದುಕಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾಗಿ ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೊದಲೇ ಪೊಲೀಸರು ಸಂಬಂಧಿಸಿದ ಹೋಟೆಲ್ ಸಿಬ್ಬಂದಿಯನ್ನು ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ವಿಡಿಯೋ ತುಣುಕುಗಳನ್ನೆಲ್ಲ ಪರಿಶೀಲಿಸಿ, ಪುರುಷ ಹಾಗೂ ಮಹಿಳೆಯರನ್ನು ಪತ್ತೆ ಹಚ್ಚಿ ಮಾಹಿತಿ ಪಡೆದು ಹಲ್ಲೆಗೈಯ್ದ ಪುಂಡರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಒಟ್ಟು ೫ ಯುವಕರ ಮೇಲೆ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಉಳಿದಿಬ್ಬರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ ಎಂದು ಶ್ರೀನಿವಾಸ ಮಾನೆ ವಿವರಿಸಿದ್ದಾರೆ.ಕಳೆದ ಒಂದು ತಿಂಗಳಿಂದ ಪೊಲೀಸರು ತೀಕ್ಷ್ಣ ಕ್ರಮ ಕೈಗೊಳ್ಳುವ ಮೂಲಕ ಬೆದರಿಕೆ, ಹಣ ವಸೂಲಿ ಇನ್ನಿತರ ಕಾನೂನುಬಾಹಿರ ದಂಧೆ ಮತ್ತು ಚಟುವಟಿಕೆಗೆ ಬ್ರೇಕ್ ಹಾಕಿದ್ದಾರೆ. ಒಟ್ಟಿನಲ್ಲಿ ಜನಸಾಮಾನ್ಯರ ಬದುಕಿಗೆ ತೊಂದರೆ ಆಗದಂತೆ, ಉತ್ತಮ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆ ಸುಧಾರಿಸುವುದು, ಅಪರಾಧ ಪ್ರಕರಣಗಳ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವಂಥ ಕೆಲಸಗಳ ಮೂಲಕ ಹೆಚ್ಚಿನ ಕಾಳಜಿ ವಹಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಶಿಗ್ಗಾಂವಿ ಉಪ ಪೊಲೀಸ್ ವರಿಷ್ಠಾಧಿಕಾರಿ, ವೃತ್ತ ನಿರೀಕ್ಷಕ ಹಾಗೂ ಉಪ ನಿರೀಕ್ಷಕರ ಸಭೆ ನಡೆಸಿ ಸೂಚಿಸಿದ್ದಾಗಿ ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.