ಸಾರಾಂಶ
ಬೆಂಗಳೂರು : ಮರಾಠಿಗರ ಕನ್ನಡ ವಿರೋಧಿ ನೀತಿ, ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ ಶನಿವಾರ ಅಖಂಡ ಕರ್ನಾಟಕ ಬಂದ್‌ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೂ ಬಂದ್ ನಡೆಯಲಿದೆ. ಆದರೆ, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಮೆಟ್ರೋ, ಸಾರಿಗೆ ನಿಗಮಗಳ ಬಸ್ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಬಂದ್ ಇದ್ದರೂ ದೈನಂದಿನ ಅವಶ್ಯಕ ವಸ್ತುಗಳಾದ ಹಾಲು ಸರಬರಾಜು, ದಿನಪತ್ರಿಕೆ, ವೈದ್ಯಕೀಯ ಸೇವೆ, ಔಷಧಿ ಅಂಗಡಿಗಳು, ಆ್ಯಂಬುಲೆನ್ಸ್, ಹೂವು, ಹಣ್ಣು, ತರಕಾರಿ, ಹೋಟೆಲ್‌ಗಳು, ಸೂಪರ್ ಮಾರ್ಕೆಟ್‌ಗಳು, ರೈಲು, ಕೆಎಸ್‌ಆರ್‌ಟಿಸಿ, ಮೆಟ್ರೋ, ಬಿಎಂಟಿಸಿ ಸೇವೆ ಸಾಮಾನ್ಯದಂತೆ ಇರಲಿದೆ. ಬೀದಿಬದಿ ವ್ಯಾಪಾರಿಗಳ ಸಂಘಟನೆಗಳು ಕೇವಲ ನೈತಿಕ ಬೆಂಬಲ ನೀಡಿದ್ದು, ವ್ಯಾಪಾರ ವ್ಯವಹಾರ ಎಂದಿನಂತೆ ನಡೆಯಲಿದೆ.
ಖಾಸಗಿ ಬಸ್, ಶಾಲಾ ವಾಹನಗಳ ಸಂಚಾರ ಇರಲಿದೆ. ಶಾಲಾ-ಕಾಲೇಜುಗಳು ತೆರೆದಿರಲಿದ್ದು, ತರಗತಿಗಳು ನಡೆಯಲಿವೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ತೆರೆದಿರಲಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿವೆ.ಏನೇನು ಇರಲ್ಲ?: ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಪ್ರದರ್ಶನ ಮಾತ್ರ ಇರುವುದಿಲ್ಲ. ಮಧ್ಯಾಹ್ನದ ನಂತರ ಚಿತ್ರ ಪ್ರದರ್ಶನ ಎಂದಿನಂತೆ ಇರಲಿದೆ. ಆಟೋ ರಿಕ್ಷಾ ಸಂಘಟನೆಗಳು ಕರ್ನಾಟಕ ಬಂದ್‌ಗೆ ಶೇ.75ರಷ್ಟು ಬೆಂಬಲ ವ್ಯಕ್ತಪಡಿಸಿದ್ದು, ಆಟೋರಿಕ್ಷಾ, ಗೂಡ್ಸ್ ವಾಹನಗಳ ಸೇವೆಯಲ್ಲಿ ಬಹುತೇಕ ವ್ಯತ್ಯಯವಾಗುವ ಸಾಧ್ಯತೆ ಇದೆ. ಓಲಾ-ಊಬರ್ ಗ್ರಾಹಕರ ಸಂಚಾರಕ್ಕೆ ಸಮಸ್ಯೆಯಾಗಲಿದ್ದು, ಸ್ವಂತ ವಾಹನ ಬಳಸುವುದು ಒಳ್ಳೆಯದು.ಏನೇನು ಇರಲ್ಲ?
ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಪ್ರದರ್ಶನ ಇರುವುದಿಲ್ಲ
ಆಟೋ ರಿಕ್ಷಾ ಸೇವೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ
ಇನ್ನು ಬೆಂಗಳೂರಿನ ಪ್ರಮುಖ 16 ಆಟೋರಿಕ್ಷಾ ಸಂಘಟನೆಗಳ ಪೈಕಿ 14 ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕಾರಣ ಶೇ.15ರಷ್ಟು ಆಟೋಗಳ ಸೇವೆ ಇರಲಿದೆ.
ಖಾಸಗಿ ಶಾಲೆಗಳಿಗೆ ರಜೆಯಿಲ್ಲ:
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲು ಸಾಧ್ಯವಿಲ್ಲ. ಎಂದಿನಂತೆ ಶಾಲೆಗಳು ತೆರೆದಿರಲಿವೆ. ಆದರೆ ಕನ್ನಡ ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಬೆಂಬಲ ಸದಾ ಇರಲಿದ್ದು, ಬಂದ್‌ನ ಬಗ್ಗೆ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ನೈತಿಕ ಬೆಂಬಲ ನೀಡಿದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ವಿವಿಧ ಸಂಘಟನೆಗಳ ಬೆಂಬಲ:
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕವನ್ನು ಸಮಗ್ರ ಅಭಿವೃದ್ಧಿ ಮಾಡಬೇಕು. ರಾಜ್ಯದ ಗಡಿನಾಡಿನ ಬೆಳವಣಿಗೆ ಮಾಡಬೇಕು. ಬೆಳಗಾವಿ ಉಳಿಸಬೇಕು, ಎಂಇಎಸ್ ನಿಷೇಧಿಸಬೇಕು. ಶಿವಸೇನೆ ಹಾಗೂ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು. ಮೇಕೆದಾಟು ಯೋಜನೆ ಆಗಲೇಬೇಕು, ಮೆಟ್ರೋ ದರ ಇಳಿಕೆ ಮಾಡಬೇಕು ಮತ್ತು ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳ ಆಗ್ರಹಿಸಿ ಬಂದ್ ನಡೆಯಲಿದೆ.
ಈ ಬಂದ್‌ಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ, ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ, ಕೆಬಿಎನ್‌ಎನ್ ವರ್ಕರ್ಸ್ ಫೆಡರೇಷನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಕರವೇ ಶಿವರಾಮೇಗೌಡ ಬಣ, ಓಲಾ- ಊಬರ್ ಚಾಲಕರ ಸಂಘ, ವೀರ ಕನ್ನಡಿಗರ ಸೇನೆ, ಬೆಂಗಳೂರು ಆಟೋ ಸೇನೆ, ಜಯಭಾರತ್ ಚಾಲಕರ ಸಂಘ, ಕರ್ನಾಟಕ ಜನಪರ ವೇದಿಕೆ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ ಯೂನಿಯನ್, ಗೂಡ್ಸ್ ಚಾಲಕರ ಸಂಘ ಸೇರಿ ಹಲವರು ಬೆಂಬಲ ನೀಡಿದ್ದಾರೆ.
ಬೆಂಬಲವಿಲ್ಲ: ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣ ಮತ್ತು ಪ್ರವೀಣ್ ಕುಮಾರ್ ಶೆಟ್ಟಿ ಬಣ ಕರ್ನಾಟಕ ಬಂದ್‌ನಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿವೆ. ಹಾಗೆಯೇ ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್, ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ ಬಂದ್‌ಗೆ ಬೆಂಬಲಿಸಿಲ್ಲ.