ಸಾರಾಂಶ
-ಜಿಲ್ಲಾಧಿಕಾರಿ ಡಾ. ಸುಶೀಲಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ತ್ರೈಮಾಸಿಕ ಸಭೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಮೇಲೆ ದೌರ್ಜನ್ಯ ಹೆಚ್ಚಿರುವ ಕಡೆ ವಿಶೇಷ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಡಾ. ಸುಶೀಲಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995 ರಲ್ಲಿ, ನಿಯಮ 17ರ ನಿಮಿತ್ತ ರಚಿಸಲಾದ ಜಿಲ್ಲಾ ಜಾಗೃತಿ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ಜನಾಂಗದ ಮೇಲೆ ಹೆಚ್ಚಿನ ದೌರ್ಜನ್ಯ ನಡೆಯುತ್ತಿರುವ ಗ್ರಾಮ ಮತ್ತು ಪ್ರದೇಶಗಳನ್ನು ಗುರುತಿಸಿ ಸೂಕ್ತ ನಿಗಾ ಇಡಬೇಕು. ದೌರ್ಜನ್ಯ ನಡೆದ ತಕ್ಷಣ ಕಾನೂನು ಹಾಗೂ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ನಿಗದಿತ ತಂಡಗಳೊಂದಿಗೆ ಆಯಾ ಸ್ಥಳಕ್ಕೆ ಭೇಟಿ ನೀಡಿ, ಅವಶ್ಯಕ ಕ್ರಮ ಕೈಗೊಳ್ಳಬೇಕು. ಸಾಕ್ಷಾಧಾರಗಳೊಂದಿಗೆ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಸಂಬಂಧಿಸಿದವರಿಗೆ ನ್ಯಾಯ ಒದಿಗಿಸಲು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.ಅನುಸೂಚಿತ ಜಾತಿ, ಅನುಸೂಚಿತ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995ರ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಈ ಜನಾಂಗದ ಮೇಲೆ ದೌರ್ಜನ್ಯ ನಡೆದ ತಕ್ಷಣ ತಾಲೂಕ ಮಟ್ಟದ ತಂಡಗಳಲ್ಲಿರುವ ಆಯುಕ್ತರು, ತಹಸೀಲ್ದಾರರು, ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ, ಕಾನೂನಿನ ರೀತಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪದೇ ಪದೇ ದೌರ್ಜನ್ಯ ನಡೆಯುವ ಸ್ಥಳಗಳಲ್ಲಿ ಸೂಕ್ತ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಜಾಗೃತಿ ಸಮಿತಿಯ ಸದಸ್ಯರು ಮಾಡಬೇಕು. ದೌರ್ಜನ್ಯಕ್ಕೆ ಒಳಗಾಗುವವರೆಗೆ ಸಾಂತ್ವನ, ರಕ್ಷಣೆ, ಪರಿಹಾರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಿ, ನ್ಯಾಯ ಒದಗಿಸುವ ಕಾರ್ಯ ಮಾಡುವಂತೆ ಅವರು ಸಲಹೆ ನೀಡಿದರು.ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಸೌಹಾರ್ದಯುತವಾಗಿ ಜೀವನ ನಡೆಸಬೇಕು. ಯಾವುದೇ ರೀತಿಯ ಮತ ಭೇದ ಭಾವ ಇರದಂತೆ ಮತ್ತು ದೌರ್ಜನ್ಯ ನಡೆಯದಂತೆ ಮುನ್ನೆಚ್ಚರಿಕೆವಹಿಸಲು ತಿಳಿಸಿದರು.
ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಿಂದ ಹಲವು ಬೇಡಿಕೆಗಳು ಬಂದಿವೆ. ಸ್ಮಶಾನಭೂಮಿ, ಸ್ವಚ್ಛತೆ ವಿವಿಧ ಠಾಣೆಗಳಲ್ಲಿನ ಪ್ರಕರಣಗಳ ಇತ್ಯರ್ಥ, ಸಕಾಲಕ್ಕೆ ಕ್ರಮ, ನೊಂದ ಸಂತ್ರಸ್ತರಿಗೆ ಪರಿಹಾರ, ವಿವಿಧ ಭವನಗಳ ನಿರ್ಮಾಣ, ಹೀಗೆ ಹಲವು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಪ್ರತಿ ಗ್ರಾಮದಲ್ಲಿ ರುದ್ರಭೂಮಿ ಕಾಯ್ದಿರಿಸಬೇಕು. ಲಭ್ಯವಿಲ್ಲದಿದ್ದಲ್ಲಿ ಪಕ್ಕದ ಗ್ರಾಮಗಳಲ್ಲಿ ಜಮೀನು ಗುರುತಿಸಿ, ಈ ಸೌಲಭ್ಯ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಅವರು ಸೂಕ್ತ ಮಾಹಿತಿ ನೀಡಿದರು. ಜಿ.ಪಂ ಸಿಇಒ ಲವೀಶ್ ಒರಾಡಿಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಡಿವೈಎಸ್ಪಿ ಅರುಣಕುಮಾರ್, ಜಾಗೃತಿ ಸಮಿತಿಯ ಸದಸ್ಯರಾದ ಮರೆಪ್ಪ ಚಟ್ಟೆರಕರ್, ನಿಂಗಪ್ಪ, ರವಿಕುಮಾರ್, ಮಲ್ಲಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಸಂತ್ರಸ್ತರಿಗೆ ಪರಿಹಾರ: ಯಾದಗಿರಿ ಜಿಲ್ಲೆಯಲ್ಲಿ ಜ.1 ರಿಂದ ಮಾ. 10ರವರೆಗೆ ದೌರ್ಜನ್ಯದಲ್ಲಿ ನೊಂದ ಒಟ್ಟು 41 ಸಂತ್ರಸ್ತರಿಗೆ 1.25 ಕೋಟಿ ರು.ಗಳ ಪರಿಹಾರ ಧನ ವಿತರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.----
ಫೋಟೊ: ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ತ್ರೈಮಾಸಿಕ ಸಭೆ ಜರುಗಿತು.20ವೈಡಿಆರ್2