ಮೊಬೈಲ್ ಗೆ ಅಂಟಿಕೊಂಡು ಸಂಬಂಧಗಳ ಕೊಂಡಿಗಳು ಕಳಚುತ್ತಿವೆ: ಟಿ.ಎಸ್.ನಾಗಾಭರಣ

| Published : Sep 26 2025, 01:00 AM IST

ಮೊಬೈಲ್ ಗೆ ಅಂಟಿಕೊಂಡು ಸಂಬಂಧಗಳ ಕೊಂಡಿಗಳು ಕಳಚುತ್ತಿವೆ: ಟಿ.ಎಸ್.ನಾಗಾಭರಣ
Share this Article
  • FB
  • TW
  • Linkdin
  • Email

ಸಾರಾಂಶ

ಅಖಂಡ ಭಾರತದಲ್ಲಿ ತಾಯಿ ಚಾಮುಂಡೇಶ್ವರಿ ಅಮ್ಮನವರ ಪೂಜೆ ಮಾಡದಂತಹ ಗ್ರಾಮಗಳೇ ಇಲ್ಲ. ವಿಜಯನಗರದ ನಂತರ ರಾಜರು ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸಿಕೊಂಡು ಬಂದಿದ್ದರು. ತದ ನಂತರ ಜನಪ್ರತಿನಿಧಿಗಳು ಸಹ ಬಹಳ ಅಚ್ಚುಕಟ್ಟಾಗಿ ಆಚರಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಂಬಂಧಗಳನ್ನು ಗಟ್ಟಿಗೊಳಿಸಲು ಹಬ್ಬಗಳ ಆಚರಣೆ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ಗೆ ಅಂಟಿಕೊಂಡಿದ್ದರಿಂದ ಸಂಬಂಧಗಳ ಕೊಂಡಿಗಳು ಕಳಚಿಕೊಳ್ಳುತ್ತಿವೆ ಎಂದು ಹಿರಿಯ ನಟ ಹಾಗೂ ನಿರ್ದೇಶಕ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿಯ ಶ್ರೀರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಎಲ್ಲರನ್ನು ಒಂದುಗೂಡಿಸುವ ಸಲುವಾಗಿ ಹಲವಾರು ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ, ಇಂದು ಮೊಬೈಲ್ ಗಳಿಗೆ ಅಂಟಿಕೊಂಡಿರುವ ಜನರು ಸಂಬಂಧಗಳ ಕೊಂಡಿಗಳನ್ನು ಕಳಚಿಕೊಳ್ಳುತ್ತಿರುವುದು ದುರಂತ ಎಂದರು.

ಅಖಂಡ ಭಾರತದಲ್ಲಿ ತಾಯಿ ಚಾಮುಂಡೇಶ್ವರಿ ಅಮ್ಮನವರ ಪೂಜೆ ಮಾಡದಂತಹ ಗ್ರಾಮಗಳೇ ಇಲ್ಲ. ವಿಜಯನಗರದ ನಂತರ ರಾಜರು ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸಿಕೊಂಡು ಬಂದಿದ್ದರು. ತದ ನಂತರ ಜನಪ್ರತಿನಿಧಿಗಳು ಸಹ ಬಹಳ ಅಚ್ಚುಕಟ್ಟಾಗಿ ಆಚರಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎಂಬ ರಾಷ್ಟ್ರಕವಿ ಕುವೆಂಪು ಅವರ ಗೀತೆ ಸಾರ್ವಕಾಲಿಕ ಸತ್ಯ. ಇದನ್ನು ಎಂದಿಗೂ ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕರಾದ ದರ್ಶನ್ ಪುಟ್ಟಣಯ್ಯ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ದಿನೇಶ್ ಗೂಳಿಗೌಡ, ವೇದ.ಬ್ರಹ್ಮ.ಡಾ.ಭಾನುಪ್ರಕಾಶ್ ಶರ್ಮಾ, ಮೈಷುಗರ್ ಅಧ್ಯಕ್ಷ ಗಂಗಾಧರ್, ಮನ್ಮುಲ್ ನಿರ್ದೇಶಕ ಬೊರೇಗೌಡ, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ನಂದಿನಿ‌, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.