ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣತಾಲೂಕಿನ ರೈತರ ಪಾಲಿಗೆ ಕಂಟಕಕಾರಿಯಾಗಿದ್ದ ಎರಡು ಪುಂಡಾನೆಗಳ ಸೆರೆ ಬೆನ್ನಲ್ಲೇ ರೈತರ ಜಮೀನಿನ ಮೇಲೆ ದಾಳಿ ನಡೆಸಿರುವ ಮತ್ತೊಂದು ಪುಂಡಾನೆಗಳ ತಂಡ ಲಕ್ಷಾಂತರ ರು. ಮೌಲ್ಯದ ಸೌತೆಕಾಯಿ ಬೆಳೆಯನ್ನು ನಾಶಪಡಿಸಿರುವ ಘಟನೆ ತಾಲೂಕಿನ ಚಿಕ್ಕವಿಠಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವರಾಜು ಎಂಬುವವರ ಜಮೀನಿಗೆ ನುಗ್ಗಿರುವ ಸುಮಾರು ೫ ಪುಂಡಾನೆಗಳಿದ್ದ ತಂಡ, ಸುಮಾರು ೩.೫ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೌತೆಕಾಯಿ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ. ದೇವರಾಜು ತಮ್ಮ ಜಮೀನಿನಲ್ಲಿ ಸುಮಾರು ೪ ಲಕ್ಷ ರು. ಖರ್ಚು ಮಾಡಿ ಸೌತೆಕಾಯಿ ಬೆಳೆ ಬೆಳೆದಿದ್ದರು. ಫಸಲಿನಿಂದ ಸುಮಾರು ೧೦ ಲಕ್ಷ ರು. ಆದಾಯ ನಿರೀಕ್ಷಿಸಿದ್ದರು. ಫಸಲು ಇನ್ನೇನು ಕೈಗೆ ಬರಬೇಕು ಎಂಬ ಹೊತ್ತಿನಲ್ಲಿ ದಾಳಿ ನಡೆಸಿರುವ ಪುಂಡಾನೆಗಳು ಸೌತೆಕಾಯಿ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ.ಪುಂಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ನಷ್ಟವಾಗಿದೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಆನೆಗಳ ದಾಳಿಗೆ ಶಾಶ್ವತ ಪರಿಹಾರ ದೊರಕಿಸಬೇಕು. ಇಲ್ಲದಿದ್ದಲ್ಲಿ ವಿಷ ಕುಡಿಯಬೇಕಾಗುತ್ತದೆ ಎಂದು ವಿಷದ ಬಾಟಲಿ ತೋರಿಸಿ ಮಾಧ್ಯಮದವರ ಮುಂದೆ ರೈತ ದೇವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಎರಡು ಪುಂಡಾನೆಗಳನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಿದ ಬೆನ್ನಲ್ಲೇ ರೈತರ ಜಮೀನುಗಳ ಮೇಲೆ ಆನೆಗಳು ದಾಂಗುಡಿ ಇಟ್ಟಿರುವುದು ರೈತರನ್ನು ಕಂಗಾಲಾಗಿಸಿದೆ.