ನಟಿ ದಂಪತಿ ಮೇಲೆ ಹಲ್ಲೆ: ನ್ಯಾಯಕ್ಕಾಗಿ ಸಚಿವ ಜೋಶಿಗೆ ಮೊರೆ

| Published : Apr 25 2024, 01:05 AM IST

ಸಾರಾಂಶ

ನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರುತಿಸಿದ್ದೇವೆ.‌ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿ, ಕೆಲ ವ್ಯಕ್ತಿಗಳನ್ನು ತೋರಿಸಿದ್ದಾರೆ. ಗಲಾಟೆ ಮಾಡಿದವರ ಮುಖಚಹರೆ ಇರುವ ವ್ಯಕ್ತಿಗಳನ್ನು ಗುರುತಿಸಿದ್ದೇವೆ.

ಹುಬ್ಬಳ್ಳಿ:

ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ತಮ್ಮ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿ ಬುಧವಾರ ನಗರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಈ ಕುರಿತು ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಕೊಡಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರುತಿಸಿದ್ದೇವೆ.‌ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿ, ಕೆಲ ವ್ಯಕ್ತಿಗಳನ್ನು ತೋರಿಸಿದ್ದಾರೆ. ಗಲಾಟೆ ಮಾಡಿದವರ ಮುಖಚಹರೆ ಇರುವ ವ್ಯಕ್ತಿಗಳನ್ನು ಗುರುತಿಸಿದ್ದೇವೆ ಎಂದು ಸಚಿವರೆದುರು ಮಾಹಿತಿ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಷಿಕಾ ಪೂಣಚ್ಚ, ನಾವು ಹೋಟೆಲ್‌ಗೆ ಹೋದ‌ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕನ್ನಡ ಮಾತಾಡಿದ್ದಕ್ಕೆ‌ ಜಗಳ ಮಾಡಿದ್ದಾರೆ. ದೌರ್ಜನ್ಯ ಎಸಗಿ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಜನಪ್ರಿಯತೆ ಇರುವ ನಮ್ಮ ಮೇಲೆ ಹೀಗಾಗಿದೆ. ಇನ್ನು ಸಾಮಾನ್ಯ ಜನರ ಸ್ಥಿತಿ ಏನು ಎಂದು ಪ್ರಶ್ನಿಸಿದರು.

ನಂತರ ಇಲ್ಲಿನ ಬಿಡನಾಳದಲ್ಲಿರುವ ಮೃತ ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ನಟಿ ಹರ್ಷಿಕಾ ಪೂಣಚ್ಚ ಕುಟುಂಬದವರಿಗೆ ಸಾಂತ್ವನ ಹೇಳಿದರು.