ತ್ಯಾಗರ್ತಿಯಲ್ಲಿ ನಡೆಯುತ್ತಿರುವ 110ಕೆವಿ ವಿದ್ಯುತ್ ಪ್ರಸರಣಾ ಘಟಕಕ್ಕೆ ಹೈಟೆನ್ಷನ್ ವಿದ್ಯುತ್ ಲೈನ್ ಕಾಮಗಾರಿಯ ಸರ್ವೇ ಕಾರ್ಯ ನಡೆಸುತ್ತಿದ್ದವರ ಮೇಲೆ ಕೊಪ್ಪ ಗ್ರಾಮದ ಕೆಲವು ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್ ಲಾವಿಗೆರೆ ಹೇಳಿದರು.
ಕನ್ನಡಪ್ರಭ ವಾರ್ತೆ ತ್ಯಾಗರ್ತಿ
ತ್ಯಾಗರ್ತಿಯಲ್ಲಿ ನಡೆಯುತ್ತಿರುವ 110ಕೆವಿ ವಿದ್ಯುತ್ ಪ್ರಸರಣಾ ಘಟಕಕ್ಕೆ ಹೈಟೆನ್ಷನ್ ವಿದ್ಯುತ್ ಲೈನ್ ಕಾಮಗಾರಿಯ ಸರ್ವೇ ಕಾರ್ಯ ನಡೆಸುತ್ತಿದ್ದವರ ಮೇಲೆ ಕೊಪ್ಪ ಗ್ರಾಮದ ಕೆಲವು ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್ ಲಾವಿಗೆರೆ ಹೇಳಿದರು.ತ್ಯಾಗರ್ತಿಯ ಮೆಸ್ಕಾಂ ಕಚೇರಿ ಎದುರು ಭಾನುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಸರ್ವೇಯರ್ ಮಲ್ಲನಗೌಡ ಹಾಗೂ ತಂಡದವರು ಹೈಟೆನ್ಷನ್ ವೈಯರ್ ಅಳವಡಿಕೆ ಸಂಬಂಧ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕೊಪ್ಪ ಗ್ರಾಮದ ಕೆಲವು ಕಿಡಿಗೇಡಿಗಳು ನಿಮಗೆ ಇಲ್ಲಿ ಕೆಲಸ ಮಾಡಲು ಹೇಳಿದವರು ಯಾರು ಎಂದು ಪ್ರಶ್ನಿಸಿ ಗಲಾಟೆ ಆರಂಭಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನೆಡೆಸಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಇಲ್ಲವಾದರೆ ರೈತರೊಂದಿಗೆ ನಾವೆಲ್ಲರೂ ಸೇರಿ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಘಟನೆಯ ಹಿನ್ನೆಲೆ:ಮಳ್ಳಾಕೊಪ್ಪ ಗ್ರಾಮದ ಸರ್ವೇ ನಂ. 71/3ರಲ್ಲಿ ಶಿವಕುಮಾರ್ ಎಂಬುವವರ ಜಾಗದಲ್ಲಿ ಶನಿವಾರ ಮಧ್ಯಾಹ್ನ 1:30ರ ಸುಮಾರಿಗೆ ಸರ್ವೇಯರ್ ಮಲ್ಲನಗೌಡ ಹಾಗೂ ತಂಡದವರು ಹೈ ಟೆನ್ಷನ್ ವೈಯರ್ ಅಳವಡಿಕೆ ಸಂಬಂಧ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕೊಪ್ಪ ಗ್ರಾಮದ ಸಂಜು, ಸಂತೋಷ್, ರಾಘವೇಂದ್ರ, ಸಚಿನ್, ಸತೀಶ್, ಸುದೀಪ್ ಹಾಗೂ ಪರಮೇಶ್ ಇವರುಗಳು ಗಲಾಟೆ ಆರಂಭಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸÀರ್ವೇಯರ್ ಮಲ್ಲನಗೌಡ ಅವರ ಮೇಲೆ ಹಲ್ಲೆನೆಡೆಸಿದ್ದಾರೆ. ಈ ಘಟನೆಯನ್ನು ತಡೆಯಲು ಹೋದ ದಾವಣಗೆರೆಯ ಬಸವಾಪುರ ಗ್ರಾಮದ ಪರಶುರಾಮ (40) ಎಂಬುವವರ ಮೇಲೆ ಆರೋಪಿಗಳು ಮುಗಿಬಿದ್ದಿದ್ದಾರೆ.
ಪರಶುರಾಮನನ್ನು ಅಟ್ಟಾಡಿಸಿಕೊಂಡು ಹೋದ ಆರೋಪಿಗಳು ಕುಮಾರಗೌಡ ಎಂಬುವವರ ಮನೆಯ ಬಳಿ ಅವರನ್ನು ಕೆಳಗೆ ಬೀಳಿಸಿ ತಲೆ ಹಾಗೂ ಎದೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕುಮಾರಗೌಡ ಎಂಬುವವರು ಸ್ಥಳಕ್ಕೆ ಬಂದಿದ್ದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆಂದು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿ.ಎಸ್.ಐ ಪ್ರವೀಣ್ ಅವರ ತಂಡ ತನಿಖೆ ನಡೆಸುತ್ತಿದೆ.