ಅಕ್ರಮ ಕಲ್ಲುಕ್ವಾರಿಗೆ ದಾಳಿ: ಬಿಜೆಪಿ ಮುಖಂಡ ಬಂಧನ, ಸ್ಫೋಟಕ ವಶಕ್ಕೆ

| Published : May 20 2024, 01:33 AM IST

ಅಕ್ರಮ ಕಲ್ಲುಕ್ವಾರಿಗೆ ದಾಳಿ: ಬಿಜೆಪಿ ಮುಖಂಡ ಬಂಧನ, ಸ್ಫೋಟಕ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳದಿಂದ ಅಕ್ರಮ ಗಾಣಿಗಾರಿಕೆಯಿಂದ ತೆಗೆದಿರುವ ಕಲ್ಲುಗಳ ರಾಶಿ, ಹಿಟಾಚಿ- 1, ಟ್ರಾಕ್ಟರ್‌- 1, ನಾಲ್ಕು ಜೀವಂತ ಮದ್ದುಗುಂಡು ಜೀವಂತ ಹಾಗೂ ಬಳಕೆಯಾಗಿರುವ 4 ಮದ್ದುಗುಂಡು ಪತ್ತೆಯಾಗಿದ್ದು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿನ ಕ್ವಾರಿಗೆ ಶನಿವಾರ ಸಂಜೆ ಬೆಳ್ತಂಗಡಿ ತಹಸೀಲ್ದಾರ್ ಮತ್ತು ಪೊಲೀಸರ ತಂಡ ಜಂಟಿ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿದ್ದು ಸ್ಫೋಟಕಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಬಂಧಿಸಲಾಗಿದೆ.

ಈ ಕಲ್ಲಿನ ಕ್ವಾರಿ ಯಾವುದೇ ಸಮರ್ಪಕವಾದ ದಾಖಲೆಗಳಿಲ್ಲದೆ ನಡೆಯುತ್ತಿತ್ತು. ಇದನ್ನು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ಹಾಗೂ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬವರು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಪ್ರಮೋದ್‌ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇಬ್ಬರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಾಗಿದೆ.

ಸ್ಥಳದಿಂದ ಅಕ್ರಮ ಗಾಣಿಗಾರಿಕೆಯಿಂದ ತೆಗೆದಿರುವ ಕಲ್ಲುಗಳ ರಾಶಿ, ಹಿಟಾಚಿ- 1, ಟ್ರಾಕ್ಟರ್‌- 1, ನಾಲ್ಕು ಜೀವಂತ ಮದ್ದುಗುಂಡು ಜೀವಂತ ಹಾಗೂ ಬಳಕೆಯಾಗಿರುವ 4 ಮದ್ದುಗುಂಡು ಪತ್ತೆಯಾಗಿದ್ದು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನಾ ಸ್ಥಳದಲ್ಲಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸುವ ವೇಳೆ ಅಕ್ರಮ ಗಣಿಗಾರಿಕೆಯನ್ನು ಆರೋಪಿಗಳಾದ ಪ್ರಮೋದ್‌ ಹಾಗೂ ಶಶಿರಾಜ್‌ ಎಂಬವರು ನಡೆಸುತ್ತಿರುವುದಾಗಿ ತಿಸಿದ್ದು ಅದರಂತೆ ಬೆಳ್ತಂಗಡಿ ತಹಸೀಲ್ದಾರ್ ನೀಡಿರುವ ದೂರಿನಂತೆ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

............

ಶಾಸಕ ಹರೀಶ್‌ ಪೂಂಜ ವಿರುದ್ಧ ಪ್ರಕರಣ

ಬಂಧನದ ವಿಷಯ ತಿಳಿಯುತ್ತಿದ್ದಂತೆ ತಡ ರಾತ್ರಿಯೇ ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ಆರಂಭಿಸಿದರು. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜ, ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಪೂಂಜ, ಯುವಮೋರ್ಚಾ ಅಧ್ಯಕ್ಷ ಶಶಿ ರಾಜ್‌ ಶೆಟ್ಟಿ ಅವರನ್ನು ರಾತ್ರಿ ಮನೆಗೆ ನುಗ್ಗಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದರು. ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪೊಲೀಸರ ಈ ನೀತಿಯ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಬೆಳಗ್ಗಿನ ಜಾವದ ವರೆಗೂ ಕಾರ್ಯಕರ್ತರ ತಂಡ ಠಾಣೆಯ ಎದುರು ಜಮಾವಣೆಯಾಗಿದ್ದರು. ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಇತರರು ಇದ್ದರು.

ಶಾಸಕ ವಿರುದ್ಧ ಪ್ರಕರಣ: ಬಂಧಿತ ಪ್ರಮುಖ ಆರೋಪಿ ಪರವಾಗಿ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಇತರ ಕೆಲವು ಜನರೊಂದಿಗೆ ಬಂದು ಶನಿವಾರ ರಾತ್ರಿ ಬೆಳ್ತಂಗಡಿ ಠಾಣೆಗೆ ಆಗಮಿಸಿ ಪೊಲೀಸರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾಗಿ ಪ್ರಕರಣ ದಾಖಲಾಗಿದೆ. ಶಾಸಕರು ಆರೋಪಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾಳಿಗೆ ಒತ್ತಡ ಹಾಕಿ, ಅವಾಚ್ಯವಾಗಿ ಬೈಂದು ಬೆದರಿಸಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿ ದುರ್ವರ್ತನೆ ತೋರಿರುತ್ತಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ: ಶಾಸಕ ವಿರುದ್ಧ ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಮೇಲಂತಬೆಟ್ಟು ಸಮೀಪದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಗಣಿಗಾರಿಕೆಗಾಗಿ ಶೇಖರಿಸಲಾಗಿದ್ದ ಅಪಾಯಕಾರಿ ಸ್ಫೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮೋದ್ ದಿಡುಪೆ ಹಾಗೂ ಶಶಿರಾಜ್ ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಮೇ 18ರಂದು ರಾತ್ರಿ ಪೊಲೀಸರು ಬಂಧಿಸಿದ್ದರು.ಈ ಬೆಳವಣಿಗೆ ವಿರೋಧಿಸಿ ಶಾಸಕ ಹರೀಶ್ ಪೂಂಜ ಹಾಗೂ ಬಿಜೆಪಿ ಕಾರ್ಯಕರ್ತರು ಶಶಿರಾಜ್ ಶೆಟ್ಟಿ ವಿರುದ್ಧ ಸುಳ್ಳು ಕೇಸ್‌ ದಾಖಲಿಸಿ ಬಂಧಿಸಲಾಗಿದೆ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಅಗ್ರಹಿಸಿ ಬೆಳ್ತಂಗಡಿ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ಇದೀಗ ಸರ್ಕಾರಿ ಕರ್ತವ್ಯ ಅಡ್ಡಿಪಡಿಸಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.