ಕೋಟಿಗಾನಹಳ್ಳಿ ರಾಮಯ್ಯ ಮೇಲಿನ ಹಲ್ಲೆ ಹೇಯ: ರಂಗಕರ್ಮಿ ಇಕ್ಬಾಲ್ ಅಹ್ಮದ್

| Published : Apr 15 2024, 01:15 AM IST

ಕೋಟಿಗಾನಹಳ್ಳಿ ರಾಮಯ್ಯ ಮೇಲಿನ ಹಲ್ಲೆ ಹೇಯ: ರಂಗಕರ್ಮಿ ಇಕ್ಬಾಲ್ ಅಹ್ಮದ್
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯರವರ ಮೇಲೆ ಸ್ಥಳೀಯರಿಂದ ಹಲ್ಲೆ ನಡೆದಿರುವುದನ್ನು ಖಂಡಿಸಿ ಕೋಟಿಗಾನಹಳ್ಳಿ ರಾಮಯ್ಯ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಚಿಂತಕರಿಂದ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಹಿರಿಯ ಸಾಹಿತಿ, ನಾಟಕ, ಕಥೆ, ಕವನ ಬರಹಗಾರರಾದ ಕೋಟಿಗಾನಹಳ್ಳಿ ರಾಮಯ್ಯರವರ ಮೇಲೆ ಸ್ಥಳೀಯರಿಂದ ಹಲ್ಲೆ ನಡೆದಿರುವುದು ಆತ್ಯಂತ ಖಂಡನೀಯ ಎಂದು ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ, ರಂಗಕರ್ಮಿ ಇಕ್ಬಾಲ್ ಅಹ್ಮದ್ ವಿಷಾದಿಸಿದರು.

ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಚಿಂತಕರಿಂದ ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು, ಕೋಟಿಗಾನಹಳ್ಳಿಯ ರಾಮಯ್ಯರವರು ಸಿನಿಮಾಗಳಿಗೆ ಸಾಕಷ್ಟು ಕಥೆ, ಸಂಭಾಷಣೆ ಬರೆದಿದ್ದಾರೆ. 2-3 ಕ್ಕೆ ರಾಜ್ಯ ಪ್ರಶಸ್ತಿ ಲಭಿಸಿವೆ. ಅಲ್ಲದೇ ಈಗಾಗಲೆ 100ಕ್ಕೂ ಹೆಚ್ಚು ಬೀದಿನಾಟಕಗಳನ್ನು ಕೂಡ ಬರೆದಿದ್ದಾರೆ ಇಂತಹ ಹಿರಿಯ ಸಾಹಿತಿಗಳ ಮೇಲೆ ಸ್ಥಳೀಯ ಕಿಡಿಗೇಡಿಗಳಿಂದ ಹಲ್ಲೆ ನಡೆದಿರುವುದು ಆತ್ಯಂತ ಖಂಡನೀಯ ಎಂದರು.

ಕೋಟಿಗಾನಹಳ್ಳಿ ರಾಮಯ್ಯರವರು ಸ್ವಗ್ರಾಮದಿಂದ ಸುಮಾರು ಎರಡು ಮೂರು ಕಿಲೋ ಮೀಟರಷ್ಟು ದೂರದಲ್ಲಿ ಬುಡ್ಡಿದೀಪ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಇದರ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕೆಲಸ ಮಾಡುತ್ತಿದ್ದಾರಲ್ಲದೇ, ಸಮಯ ಸಿಕ್ಕಾಗಲೆಲ್ಲಾ ನಾಟಕ ಕಥೆ ಬರೆಯುವುದು ಅವರಿಗೆ ರೂಡಿಯಾಗಿದೆ. ಈರೀತಿ ನಾಟಕ ಬರೆಯುವಾಗ ಅಲ್ಲಿನ ದೇವಸ್ಥಾನದಲ್ಲಿ ಧ್ವನಿವರ್ಧಕದ ಶಬ್ದ ಹೆಚ್ಚಾಗಿದ್ದರಿಂದ ಅವರು ಹಾಗೂ ಅವರ ಪುತ್ರ ಹೋಗಿ ಸೌಂಡ್ ಕಡಿಮೆ ಮಾಡಲು ತಿಳಿಸಿದ್ದರಿಂದ ಅಲ್ಲಿನ ಕೆಲ ಕಿಡಿಗೇಡಿಗಳು ಏಕಾಏಕಿಯಾಗಿ ಇಬ್ಬರ ಮೇಲೆ ಹಲ್ಲೆ ನಡೆಸಿರುವುದು ಹೇಯ ಕೃತ್ಯವಾಗಿದೆ ಎಂದರು.

ಕೋಟೆಗಾನಹಳ್ಳಿ ರಾಮಯ್ಯ ಅಭಿಮಾನಿ ಬಳಗದ ಸಂಚಾಲಕ ಕೆ.ಎಸ್ ಹುಚ್ರಾಯಪ್ಪ ಮಾತನಾಡಿ, ಕಲಾವಿದರಿಗೆ, ಸಾಹಿತಿಗಳಿಗೆ, ಪ್ರಗತಿಪರ ಚಿಂತಕರಿಗೆ ಅವಮಾನಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು ಅನೇಕ ವರ್ಗಗಳಿಂದ ನಡೆಯುತ್ತಾ ಬಂದಿದೆ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ ಕಲಾವಿದರಿಗೆ ಸಾಹಿತಿಗಳಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕರು ಹಾಗೂ ವಕೀಲರಾದ ಸತ್ಯನಾರಾಯಣ,ಬನ್ನೂರು ಮಂಜಪ್ಪ,ಮಾಲತೇಶ್ ಮತ್ತಿತರರಿದ್ದರು.