ವಕೀಲರ ಮೇಲೆ ಹಲ್ಲೆ: ಕಲಾಪ ಬಹಿಷ್ಕರಿಸಿ ಪ್ರತಿಭಟನೆ

| Published : Apr 22 2025, 01:46 AM IST

ಸಾರಾಂಶ

ಏ. ೧೬ರಂದು ವಕೀಲರ ಪರಿಷತ್‌ ಅಧ್ಯಕ್ಷ ಸದಾಶಿವರೆಡ್ಡಿ ಅವರ ಮೇಲೆ ಅಪರಿಚಿತರಿಂದ ಹಲ್ಲೆ ನಡೆದಿದೆ. ಈ ಹಲ್ಲೆ ಖಂಡಿಸಿ ಏ. ೨೧ರಂದು ಕೋರ್ಟ್‌ ಕಲಾಪದಿಂದ ದೂರವುಳಿದು ಕೈಗೆ ಕೆಂಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಗಿದೆ.

ಕಾರಟಗಿ:

ಹಿರಿಯ ವಕೀಲ ಸದಾಶಿವರೆಡ್ಡಿ ಅವರ ಮೇಲಿನ ಹಲ್ಲೆ ಖಂಡಿಸಿ ಇಲ್ಲಿನ ವಕೀಲರ ಸಂಘ ಪಟ್ಟಣದಲ್ಲಿ ಸೋಮವಾರ ಕಲಾಪ ಬಹಿಷ್ಕರಿಸಿ ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.

ಇಲ್ಲಿನ ವಿಶೇಷ ಎಪಿಎಂಸಿ ಗೇಟ್‌ನಿಂದ ಆರಂಭವಾದ ಮೌನ ಪ್ರತಿಭಟನೆ ಮೆರವಣಿಗೆ ತಹಸೀಲ್ದಾರ್‌ ಕಚೇರಿ ಆವರಣಕ್ಕೆ ಆಗಮಿಸಿತು. ಬಳಿಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ ಎಂ. ಕುಮಾರಸ್ವಾಮಿ ಮೂಲಕ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಪರಶುರಾಮ ನಾಯಕ, ಏ. ೧೬ರಂದು ವಕೀಲರ ಪರಿಷತ್‌ ಅಧ್ಯಕ್ಷ ಸದಾಶಿವರೆಡ್ಡಿ ಅವರ ಮೇಲೆ ಅಪರಿಚಿತರಿಂದ ಹಲ್ಲೆ ನಡೆದಿದೆ. ಈ ಹಲ್ಲೆ ಖಂಡಿಸಿ ಏ. ೨೧ರಂದು ಕೋರ್ಟ್‌ ಕಲಾಪದಿಂದ ದೂರವುಳಿದು ಕೈಗೆ ಕೆಂಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಗಿದೆ ಎಂದರು.

ಹಲ್ಲೆ ನಡೆಸಿರುವ ಅಪರಿಚಿತರು, ಕೇಸ್ ಕೊಡುವ ನೆಪದಲ್ಲಿ ಕಚೇರಿಗೆ ಆಗಮಿಸಿ ಅವರಲ್ಲೊಬ್ಬ ವಕೀಲರ ಮೇಲೆ ಫೈಬರ್ ಪೈಪ್‌ನಿಂದ ಹೊಡೆದು ಗಾಯಗೊಳಿಸಿದ್ದಾನೆ. ಇನ್ನೊಬ್ಬ ಹೊಡೆಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ಇವರಿಬ್ಬರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆಹಚ್ಚಬೇಕು. ದಾಳಿ ನಡೆಸಿದ ಅಪರಿಚಿತ ವ್ಯಕ್ತಿಗಳು ಸದಾಶಿವರೆಡ್ಡಿ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಈ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತ್ವರಿತವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳಾದ ನಾಗರಾಜ ಬೂದಿ, ತ್ರಿಲೋಚನ ಕೋಲ್ಕಾರ್‌, ಬಸವರಾಜ ಆರಾಪೂರ, ಮಂಜುನಾಥ ಪುರ್ತಗೇರಿ, ಕೆ. ಪರಸಪ್ಪ, ಮಹೇಶ್ವರ ಸ್ವಾಮಿ, ಅಂಬಣ್ಣ ನಾಯಕ, ಪಂಪಾಪತಿ ಈಳಿಗನೂರ, ಅರುಣ ನಾಯಕ, ಕೇಶವ ನಾಯಕ, ಬಸವನಗೌಡ ಯರಡೊಣಾ, ಅಮರೇಗೌಡ, ಸೀಮಾ ಹಿರೇಮಠ, ಕವಿತಾ, ವಿಜಯಪಾಟೀಲ್ ನವಲಿ, ಪ್ರಸಾದ ಉಪನಾಳ, ಶರಣಪ್ಪ ರಾಂಪೂರ, ಪೃಥ್ವಿರಾಜ, ಮಾರುತಿ ಹುಳ್ಕಿಹಾಳ ಸೇರಿದಂತೆ ಸಂಘದ ಸದಸ್ಯರು ಇದ್ದರು.