ಸಾರಾಂಶ
ವಿದ್ಯಾರ್ಥಿಗಳ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ ಘಟನೆ ಮಂಗಳವಾರ ನಡೆದಿದೆ. ಹೆಜ್ಜೇನುಗಳು ಸುಮಾರು 41 ವಿದ್ಯಾರ್ಥಿಗಳಿಗೆ ಕುಟುಕಿದೆ.
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಒಳಕಾಡು ವಾರ್ಡಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ ಘಟನೆ ಮಂಗಳವಾರ ನಡೆದಿದೆ. ಹೆಜ್ಜೇನುಗಳು ಸುಮಾರು 41 ವಿದ್ಯಾರ್ಥಿಗಳಿಗೆ ಕುಟುಕಿದ್ದರೆ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಶಾಲೆಯ ಹೊರಗೆ ಮಾಡಿನಲ್ಲಿ ಈ ಹೆಜ್ಜೇನುಗಳು ಅನೇಕ ಸಮಯದಿಂದ ಗೂಡು ಕಟ್ಟಿಕೊಂಡಿದ್ದವು. ಮಂಗಳವಾರ ಮಧ್ಯಾಹ್ನ ಶಾಲಾ ಆವರಣದಲ್ಲಿ ಆಡುತ್ತಿದ್ದ ವಿದ್ಯಾರ್ಥಿಗಳಲ್ಲೊಬ್ಬ ಜೇನುಗೂಡಿಗೆ ಕಲ್ಲು ಎಸೆದಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟುಗೊಂಡು ಹೆಜ್ಜೇನುಗಳು ಏಕಾಏಕಿ ಸಿಕ್ಕಿಸಿಕ್ಕಿದ ವಿದ್ಯಾರ್ಥಿಗಳ ಮೇಲೆರಗಿದವು, ತಕ್ಷಣ ವಿದ್ಯಾರ್ಥಿಗಳು ನೋವಿನಿಂದ ಬೊಬ್ಬೆ ಹೊಡೆದರು. ಕೂಡಲೇ ಶಿಕ್ಷಕರು ಜೇನ್ನೋಣಗಳಿಂದ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದರು.ವಿಷಯ ತಿಳಿದು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಬಂದ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಕಿಟಕಿ ಬಳಿ ಹೋದಾಗ ಅವರ ಮೇಲೆಯೂ ಹತ್ತಾರು ಜೇನುನೋಣಗಳು ದಾಳಿ ನಡೆಸಿದ್ದು ಅವರು ತೀವ್ರ ಆಘಾತಕ್ಕೊಳಗಾದರು.ವಿದ್ಯಾರ್ಥಿಗಳಲ್ಲಿ ಮೂವರನ್ನು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿದೆ. ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನು ಜಿಲ್ಲಾಸ್ಪತ್ರೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ.