ಸಾರಾಂಶ
- ಕೈ-ಕಾಲಿನಿಂದ ಹಲ್ಲೆ ನಡೆಸಿ ಸೀರೆ ಎಳೆದಾಡಿದ್ದ ಅಣ್ಣ! - - -
ಕನ್ನಡಪ್ರಭ ವಾರ್ತೆ ದಾವಣಗೆರೆಸ್ವಂತ ತಂಗಿಗೆ ಅವಾಚ್ಯವಾಗಿ ನಿಂದಿಸಿ, ಕೈ-ಕಾಲುಗಳಿಂದ ಹೊಡೆದು, ಸೀರೆ ಹಿಡಿದು ಎಳೆದಾಡಿ ಅವಮಾನಿಸಿದ್ದ ಅಪರಾಧಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ನಾಗರಾಜ ಈಶಪ್ಪ (42) ಶಿಕ್ಷೆಗೆ ಗುರಿಯಾದ ಅಪರಾಧಿ. 2024ರ ಆಗಸ್ಟ್ 8ರಂದು ಆರೋಪಿ ನಾಗರಾಜ ತನ್ನ ತಂಗಿ ಗೌರಮ್ಮ ಬೆನಕೇಶ ಅವರ ಮೇಲೆ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಸಂತ್ರಸ್ಥೆ ದೂರು ನೀಡಿದ್ದರು.ಒಡೆಯರ್ ಹತ್ತೂರು ಗ್ರಾಮದ ಬೆನಕೇಶ್‌ಗೆ ಗೌರಮ್ಮ ಅವರನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಆಕೆಯ ಅಣ್ಣ ನಾಗರಾಜನಿಗೂ ಮದುವೆಯಾಗಿದ್ದು, ಹೆಂಡತಿ ಬಿಟ್ಟುಹೋಗಿದ್ದು, ತನ್ನ ತಂದೆ ಈರಪ್ಪ, ತಾಯಿ ಉಮ್ಮಕ್ಕನ ಜೊತೆಗೆ ವಾಸವಿದ್ದರು. ನಿತ್ಯವೂ ಖರ್ಚಿಗೆ ಹಣ ಕೊಡುವಂತೆ ತಂದೆ-ತಾಯಿಗೆ ನಿಂದಿಸಿ, ಹೊಡೆಯುತ್ತಿದ್ದ. ಬುದ್ಧಿ ಹೇಳಿದರೂ ಕೇಳಿರಲಿಲ್ಲ.
2024ರ ಆಗಸ್ಟ್ 8ರಂದು ತಂದೆ ಈರಪ್ಪ ಮಧ್ಯಾಹ್ನ 1.30ರ ವೇಳೆ ತನಗೆ ಕರೆ ಮಾಡಿ, ನಾಗರಾಜ ಹಣ ಕೊಡುವಂತೆ ಜಗಳ ಮಾಡುತ್ತಿರುವ ಬಗ್ಗೆ ಹೇಳಿದ್ದರು. ಹಾಗಾಗಿ, ಗೌರಮ್ಮ ಗಂಡನ ಮನೆ ಒಡೆಯರ ಹತ್ತೂರಿನಿಂದ ತವರು ಚೀಲೂರಿಗೆ ಹೋಗಿ, ನಾಗರಾಜನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ನಾಗರಾಜ ಅವಾಚ್ಯವಾಗಿ ಬೈದು, ಕೈ-ಕಾಲುಗಳಿಂದ ಹಲ್ಲೆ ನಡೆಸಿದ್ದಲ್ಲದೇ, ಸೀರೆ ಎಳೆದು ಅವಮಾನಿಸಿದ್ದನು. ಬಿಡಿಸಲು ಬಂದ ತಂದೆ, ಪತಿ ಬೆನಕೇಶ, ತಾಯಿ ಇತರರಿಗೂ ಕೈ-ಕಾಲುಗಳಿಂದ ಹಲ್ಲೆ ನಡೆಸಿ, ತನಗೆ ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲವೆಂಬ ಬೆದರಿಕೆ ಕೂಡ ಹಾಕಿದ್ದ. ಅಸ್ವಸ್ಥಗೊಂಡಿದ್ದ ತಂದೆಗೆ ನ್ಯಾಮತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರು. ಘಟನೆ ಬಗ್ಗೆ ತಂಗಿ ಗೌರಮ್ಮ ದೂರಿನಲ್ಲಿ ತಿಳಿಸಿದ್ದರು.ತನಿಖಾಧಿಕಾರಿ ಪಿಎಸ್ಐ ಬಿ.ಎಲ್. ಜಯಪ್ಪ ನಾಯ್ಕ ಪ್ರಕರಣ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯ ಚೀಲೂರಿನ ನಾಗರಾಜನನ್ನು ಅಪರಾಧಿ ಎಂದು ತೀರ್ಮಾನಿಸಿ, ತೀರ್ಪು ನೀಡಿದರು. ಪಿರ್ಯಾದಿ ಪರ ಸರ್ಕಾರಿ ವಕೀಲರಾದ ಕೆ.ಎಸ್.ಸತೀಶ ನ್ಯಾಯ ಮಂಡನೆ ಮಾಡಿದ್ದರು.
- - -(ಸಾಂದರ್ಭಿಕ ಚಿತ್ರ)