ವಸ್ತ್ರ ಸಂಹಿತೆ ವಿಚಾರವಾಗಿ ವಿವಾದ : ಕಟ್ಟೆಮಾಡು ದೇವಾಲಯದ ಪ್ರಧಾನ ಅರ್ಚಕರಿಗೆ ಹಲ್ಲೆ

| N/A | Published : Jan 28 2025, 12:47 AM IST / Updated: Jan 28 2025, 07:57 AM IST

ವಸ್ತ್ರ ಸಂಹಿತೆ ವಿಚಾರವಾಗಿ ವಿವಾದ : ಕಟ್ಟೆಮಾಡು ದೇವಾಲಯದ ಪ್ರಧಾನ ಅರ್ಚಕರಿಗೆ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ವಸ್ತ್ರ ಸಂಹಿತೆ ವಿಚಾರವಾಗಿ ವಿವಾದದ ಕೇಂದ್ರ ಬಿಂದುವಾಗಿರುವ ಮಡಿಕೇರಿ ತಾಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕರ ಮೇಲೆ ಸೋಮವಾರ ಸಂಜೆ ತೀವ್ರ ಹಲ್ಲೆಯಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

 ಮಡಿಕೇರಿ : ವಸ್ತ್ರ ಸಂಹಿತೆ ವಿಚಾರವಾಗಿ ವಿವಾದದ ಕೇಂದ್ರ ಬಿಂದುವಾಗಿರುವ ಮಡಿಕೇರಿ ತಾಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕರ ಮೇಲೆ ಸೋಮವಾರ ಸಂಜೆ ತೀವ್ರ ಹಲ್ಲೆಯಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮಡಿಕೇರಿ ತಾಲೂಕಿನ ಮೂರ್ನಾಡುವಿನಲ್ಲಿರುವ ಅರ್ಚಕರ ಮನೆಗೆ ಬಂದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ.

ವ್ಯಕ್ತಿಯೊಬ್ಬರು ಫೋನ್ ಕರೆ ಮಾಡಿ ‘ಪೂಜೆ ಮಾಡಿಸಬೇಕು, ತಮ್ಮನ್ನು ಭೇಟಿಯಾಗಬೇಕು’ ಎಂದು ಹೇಳಿದ್ದರು. ಅದರಂತೆ ಮನೆಗೆ ಆಗಮಿಸಿದ ಇಬ್ಬರು, ದೇವಾಲಯದ ವಿವಾದದ ವಿಚಾರವನ್ನು ಹೇಳಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ವಿಘ್ನೇಶ್ ಭಟ್, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ದೇವಸ್ಥಾನ ಪ್ರವೇಶಿಸುವ ಭಕ್ತರಿಗೆ ವಸ್ತ್ರಸಂಹಿತೆ ವಿಧಿಸಲಾಗಿದೆ ಎಂದು ಆಕ್ಷೇಪಿಸಿ ಇತ್ತೀಚೆಗೆ ಹುಟ್ಟಿಕೊಂಡಿದ್ದ ವಸ್ತ್ರಸಂಹಿತೆ ವಿವಾದ ಹಿನ್ನೆಲೆಯಲ್ಲಿ ಕಟ್ಟೆಮಾಡು ದೇವಾಲಯದ ಸುತ್ತ ಫೆ.10ರ ವರೆಗೆ ಕೊಡಗು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿತ್ತು. ಫೆ.10ರೊಳಗೆ ಸಾಂಪ್ರದಾಯಿಕ ಉಡುಗೆ ಕುರಿತು ತೀರ್ಮಾನಕ್ಕೆ ಬರುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಫೆ.2ರಿಂದ ಕಾಲ್ನಡಿಗೆ ಜಾಥಾಕ್ಕೆ ಕೊಡವ ಸಂಘಟನೆಗಳು ಮುಂದಾಗಿತ್ತು. ಇದೀಗ ಅರ್ಚಕರ ಮೇಲಿನ ಹಲ್ಲೆಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಬ್ರಾಹ್ಮಣ ಸಮಾಜ ಖಂಡನೆ:

ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ಹಲ್ಲೆ ಘಟನೆಯನ್ನು ಕೊಡಗು ಬ್ರಾಹ್ಮಣ ಸಮಾಜ ಖಂಡಿಸಿದೆ.

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು ಅಧ್ಯಕ್ಷ ರಾಮಚಂದ್ರ ಮೂಗೂರು ಖಂಡನೆ ವ್ಯಕ್ತಪಡಿಸಿದ್ದು, ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಅರ್ಚಕ ವಿಘ್ನೇಶ್ ಭಟ್ ಹಾಗೂ ಅರ್ಚಕರ ಕುಟುಂಬಸ್ಥರಿಗೂ ಸಾಂತ್ವನ ಹೇಳಿದ್ದಾರೆ.

ಘಟನೆಗೆ ಕಾರಣರಾದವರ ವಿರುದ್ಧ ತಡ ಮಾಡದೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಬ್ರಾಹ್ಮಣ ಸಮಾಜದ ಪ್ರಮುಖರು ಒತ್ತಾಯ ಮಾಡಿದ್ದಾರೆ.