ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್ಮೆಂಟ್ ಆ್ಯಕ್ಟ್ (ಕೆಎಮ್ಪಿಇಎ) ಅನುಮತಿ ಪಡೆಯದೆ ರಾಜಾರೋಷವಾಗಿ ಹಳ್ಳಿಗಳಲ್ಲಿ ತಲೆಯುತ್ತಿರುವ ಖಾಸಗಿ ಕ್ಲಿನಿಕ್‌ಗಳ ಮೇಲೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ನೋಡಲ್ ಅಧಿಕಾರಿ ಹಾಗೂ ತಾಲೂಕ ಆರೋಗ್ಯಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ವೈದ್ಯಕೀಯ ತಪಾಸಣೆ ಮಾಡುತ್ತಿರುವವರ ಮೇಲೆ ದಾಳಿ ನಡೆಸಿದೆ.ಹಲವು ವರ್ಷಗಳಿಂದ ಗ್ರಾಮದಲ್ಲಿ ವೈದ್ಯಕೀಯ ತಪಾಸಣೆ ಮಾಡುತ್ತಿರುವ ಕೊಲ್ಕತ್ತಾ ಮೂಲದ ದೀಪಾಂಕರ ಜೋಶಿ ಮತ್ತು ಸುಧೀರ್ ಎನ್ನುವವರು ಅಧಿಕಾರಿಗಳು ದಾಳಿ ನಡೆಸುವ ವಿಷಯ ಅರಿತು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇವರು ಕ್ಲಿನಿಕ್ ನಡೆಸುತ್ತಿದ್ದ ಮಳಿಗೆಗಳನ್ನು ವಶಕ್ಕೆ ಪಡೆದು ಬೀಗ ಜಡಿದು ಮಳಿಗೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ, ಎನ್. ಎಸ್. ಕುಂಬಾರ್, ಶಿವಗಂಗಾ, ಖಾಸಿಂಸಾಬ್ ಇವರುಗಳೂ ಸಹ ಕೆಎಮ್ಪಿಇಎ ಕಾಯ್ದೆ ಉಲ್ಲಂಘಿಸಿ ಕಾನೂನುಬಾಹಿರವಾಗಿ ಕ್ಲಿನಿಕ್ ನಡೆಸುತ್ತಿರುವದನ್ನು ಮನಗಂಡ ಅಧಿಕಾರಿಗಳು ಈ ಮೂವರಿಗೂ ನೋಟಿಸ್ ನೀಡಿ ಅಗತ್ಯ ದಾಖಲೆಗಳನ್ನು ಇಲಾಖೆಗೆ ತಂದು ಒಪ್ಪಿಸುವಂತೆ ಸೂಚನೆ ನೀಡಿದ್ದಾರೆ.ನಕಲಿ ವೈದ್ಯರ ಬಗ್ಗೆ ಎಚ್ಚರ. ಹಳ್ಳಿಗಳಲ್ಲಿ ವೈದ್ಯಕೀಯ ತಪಾಸಣೆ ಮಾಡುತ್ತಿರುವ ನಕಲಿ ವೈದ್ಯರು ಹಾಗೂ ಖಾಸಗಿ ಕ್ಲಿನಿಕ್ ಗಳ ಬಗ್ಗೆ ಸಾರ್ವಜನಿಕರು ಎಚ್ಚರವಿರಬೇಕು. ಅವರು ನಿಜವಾದ ವೈದ್ಯರೇ ಎನ್ನುವುದು ಖಾತರಿ ಪಡಿಸಿಕೊಳ್ಳಬೇಕು. ಅನುಮಾನ ಬಂದರೆ ಪಿಸಿಆರ್ (ಪ್ರೈವೇಟ್ ಕಂಪ್ಲೇಂಟ್ ರಿಜಿಸ್ಟರ್)ನ ಮೂಲಕ ಸಾರ್ವಜನಿಕರು ನಕಲಿ ವೈದ್ಯರ ವಿರುದ್ಧ ದೂರು ದಾಖಲಿಸಬಹುದು. ಇದರಿಂದ ಅನೇಕ ಜೀವಗಳು ಉಳಿಸಿದಂತಾಗುತ್ತದೆ. ಇಲ್ಲವೇ ತಕ್ಷಣ ಇಲಾಖೆ ಗಮನಕ್ಕೆ ತರಬೇಕು ಎಂದು ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಕಟ್ಟಡ ಮಾಲೀಕರೆ ಎಚ್ಚರ: ಕಟ್ಟಡ ಮಾಲೀಕರು ಯಾವುದೇ ವ್ಯಕ್ತಿಗೆ ತಮ್ಮ ಕಟ್ಟಡ ಅಥವಾ ಮಳಿಗೆಗಳನ್ನು ಬಾಡಿಗೆ ರೂಪದಲ್ಲಿ ಕೊಡುವಾಗ ಬಾಡಿಗೆದಾರರ ಬಗ್ಗೆ ಸಂಪೂರ್ಣ ತಿಳಿದು ಅಗತ್ಯ ದಾಖಲೆಗಳನ್ನು ಪಡೆದು ಬಾಡಿಗೆ ನೀಡುವದು ಸೂಕ್ತ. ಇಲ್ಲದೆ ಹೋದಲ್ಲಿ ಬಾಡಿಗೆ ನೀಡಿದ ಮಾಲೀಕರ ಮೇಲೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ದಾಳಿ ಸಂದರ್ಭದಲ್ಲಿ, ಜಿಲ್ಲಾ ಆರೋಗ್ಯ ನೋಡಲಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ರಮೇಶ್ ಗುತ್ತೇದಾರ್, ಹಿರಿಯ ಆರೋಗ್ಯ ನಿರೀಕ್ಷಕ ಮಲ್ಲಪ್ಪ ಕಾಂಬಳೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.