ದಲಿತರ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕಿದೆ: ಗೋಪಾಲಕೃಷ್ಣ ಹರಳಹಳ್ಳಿ

| Published : May 11 2025, 11:52 PM IST

ದಲಿತರ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕಿದೆ: ಗೋಪಾಲಕೃಷ್ಣ ಹರಳಹಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಎಸ್ಸಿ,ಎಸ್ಪಿ, ಟಿಎಸ್ಪಿ ಉಪಯೋಜನೆ ಪರಿಣಾಮವಾಗಿ ಜಾರಿ ಮಾಡಲು ಡಾ.ಬಿ.ಆರ್.ಅಂ‌ಬೇಡ್ಕರ್‌ ಅಭಿವೃದ್ಧಿ ನಿಗಮ ಭೂ ಒಡೆತನ ಯೋಜನೆಯಡಿ ಭೂ ಸ್ವಾಧೀನ ಮಾಡಿ ದಲಿತರಿಗೆ ಭೂಮಿ ಕೊಡಬೇಕು. ಗ್ಯಾರಂಟಿ ಯೋಜನೆ ಗುಂಗಿನಲ್ಲಿರುವ ಕಾಂಗ್ರೆಸ್‌ ಸರ್ಕಾರ ಈ ಯೋಜನೆಗೆ 42,018 ಕೋಟಿ ರು. ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ದಲಿತರಿಗೆ ಹಣ ಹಂಚುವಲ್ಲಿ ಸಂಪೂರ್ಣ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದಲಿತರ ಮೇಲೆ ಹಿಂದುತ್ವ, ಮನುವಾದಿ ಹಾಗೂ ಕೋಮುವಾದಿಗಳಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸಬೇಕಿದೆ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ದಲಿತ ಹಕ್ಕುಗಳ ಸಮಿತಿ (ಕರ್ನಾಟಕ)ದ ಸಹಯೋಗದಲ್ಲಿ ನಡೆದ ಜಾತಿ ಅಸ್ಪೃಶ್ಯತೆ ನಿವಾರಣೆ ಮತ್ತು ಐಕ್ಯತೆಗಾಗಿ ದಲಿತರ, ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಕುರಿತು ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಎಸ್ಸಿ,ಎಸ್ಪಿ, ಟಿಎಸ್ಪಿ ಉಪಯೋಜನೆ ಪರಿಣಾಮವಾಗಿ ಜಾರಿ ಮಾಡಲು ಡಾ.ಬಿ.ಆರ್.ಅಂ‌ಬೇಡ್ಕರ್‌ ಅಭಿವೃದ್ಧಿ ನಿಗಮ ಭೂ ಒಡೆತನ ಯೋಜನೆಯಡಿ ಭೂ ಸ್ವಾಧೀನ ಮಾಡಿ ದಲಿತರಿಗೆ ಭೂಮಿ ಕೊಡಬೇಕು. ಗ್ಯಾರಂಟಿ ಯೋಜನೆ ಗುಂಗಿನಲ್ಲಿರುವ ಕಾಂಗ್ರೆಸ್‌ ಸರ್ಕಾರ ಈ ಯೋಜನೆಗೆ 42,018 ಕೋಟಿ ರು. ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ದಲಿತರಿಗೆ ಹಣ ಹಂಚುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಜಮೀನು ಇಲ್ಲದ ದಲಿತರಿಗೆ 2018ರಿಂದ ಇಲ್ಲಿವರೆಗೂ ಒಂದು ಎಕರೆ ಜಮೀನು ಕೊಡಲು ಆಗಿಲ್ಲ. ಬಂಡವಾಳಶಾಹಿಗಳಿಗೆ ಹಾಗೂ ಮಠಗಳಿಗೆ ಭೂ ಸ್ವಾಧೀನ ಮಾಡಿಕೊಂಡು ಕೊಡುತ್ತಾರೆ. ಆದರೆ, ದಲಿತರಿಗೂ ಭೂ ಸ್ವಾಧೀನ ಮಾಡಿ ಭೂಮಿ ನೀಡಬೇಕು. ಸರ್ಕಾರ ಈ ವಿಚಾರವಾಗಿ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಿಪಿಐಎಂ ಟಿ.ಎಲ್‌.ಕೃಷ್ಣೇಗೌಡ ಮಾತನಾಡಿ, ದಲಿತರ ಹಕ್ಕುಗಳ ಬಗ್ಗೆ ಕಾಳಜಿ ಇರುವಂತಹ ಎಲ್ಲ ಮನಸ್ಸಿನ ಸಂಘಟನೆಗಳು ದಲಿತ ಹಕ್ಕುಗಳ ಸಮಿತಿ ಪರ ಕೆಲಸ ಮಾಡುತ್ತಿದೆ. ಇದೇ ರೀತಿ ಒಗ್ಗಟ್ಟಾಗಿ ಹೋರಾಟ ಮಾಡಬೇಕೆನ್ನುವ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರಾಜಣ್ಣ, ಉಪಾಧ್ಯಕ್ಷ ಬಿ.ರಾಜಶೇಖರ ಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಕೃಷ್ಣ, ಉಪಾಧ್ಯಕ್ಷ ಎಚ್‌.ಜಿ.ನಾಗಣ್ಣ, ಕಾರ್ಯದರ್ಶಿ ಅಂಬೂಜಿ, ಸಹ ಕಾರ್ಯದರ್ಶಿಗಳಾದ ಎನ್‌.ನಾಗರಾಜು, ಪೃಥ್ವಿ ಭಾಗವಹಿಸಿದ್ದರು.