ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪಟ್ಟಣ ಸಮೀಪದ ಮಲ್ಲೇಪುರ ಗ್ರಾಮದಲ್ಲಿ ಮೂವತ್ತು ವರ್ಷಗಳಿಂದ ಭೂಸ್ವಾಧೀನದಲ್ಲಿದ್ದ ರೈತರ ಜಮೀನನ್ನು ಕಬಳಿಸಲು ಬಲಾಢ್ಯರು ಯತ್ನಿಸುತ್ತಿದ್ದಾರೆ, ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಬೆಲೆ ಬಾಳುವ ಜಮೀನು ನುಂಗಲು ಮುಂದಾಗಿದ್ದಾರೆ ಎಂದು ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷ ಸಂದೇಶ್ ಆಕ್ರೋಶ ವ್ಯಕ್ತಪಡಿಸಿದರು.ಚನ್ನರಾಯಪಟ್ಟಣ ಹೋಬಳಿಯ ಮಲ್ಲೇಪುರ ಗ್ರಾಮದಲ್ಲಿ ನಡೆದ ಗೋಮಾಳ ಜಮೀನಿಗಾಗಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ವೇ ನಂಬರ್ ೫೦ /ಪಿ೧ ,೧೬ ಎಕರೆ ೩೪ ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು, ಅಲ್ಲಿನ ಮೂಲ ನಿವಾಸಿಗಳು ಬದುಕು ಕಟ್ಟಿಕೊಂಡಿದ್ದ ಪ್ರದೇಶಕ್ಕೆ ಈಗ ಬೆಲೆ ಜಾಸ್ತಿಯಾಗಿದೆ ಎಂಬ ಕಾರಣಕ್ಕೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕೆಲವು ವ್ಯಕ್ತಿಗಳ ಹೆಸರಿಗೆ ಮಾಡಿದ್ದು, ಜಮೀನಿನ ಅಕ್ರಮ ದಾಖಲೆ ಸೃಷ್ಟಿ ಮಾಡಿರುವುದನ್ನು ವಜಾ ಮಾಡುವಂತೆ ಆಗ್ರಹಿಸಿದರು.
ಗ್ರಾಮಸ್ಥರಾದ ರಾಮಾಂಜಿನಪ್ಪ ಮಾತನಾಡಿ, ಬಲಾಢ್ಯ0ರು ಮತ್ತು ಅಧಿಕಾರಿಗಳು ಒಗ್ಗೂಡಿ ರೈತರು ಸ್ವಾಧೀನದಲ್ಲಿದ್ದ 16 ಎಕರೆ, 34 ಗುಂಟೆ ಜಾಗವನ್ನು ಲಪಟಾಯಿಸಲು ಕಾನೂನಿಗೆ ವಿರುದ್ಧವಾದ ಹಾದಿಯನ್ನು ಬಳಸುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಗಮನಹರಿಸಿ ಗ್ರಾಮದ ಭೂಸ್ವಾಧೀನದಲ್ಲಿರುವವರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕದಿರಪ್ಪ ಮಾತನಾಡಿ, ಮೂವತ್ತು ವರ್ಷಗಳಿಂದ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವ್ಯವಸಾಯ ಮಾಡುತ್ತಿದ್ದ ಗ್ರಾಮಸ್ಥರಿಗೆ ಅನ್ಯಾಯವಾಗುತ್ತಿದೆ, ಕೆಂಪೇಗೌಡ ಏರ್ಪೋರ್ಟ್ ನ ಕೂದಲೆಳೆಯ ಅಂತರದಲ್ಲಿರುವ ಮಲ್ಲೇಪುರ ಗ್ರಾಮದ ಕೋಟ್ಯಾಂತರ ಬೆಲೆಬಾಳುವ ಜಮೀನು ನುಂಗಲು ಬಲಾಢ್ಯರ ಕಣ್ಣು ಬಿದ್ದಿದೆ, ಸುಪ್ರೀಂ ಕೋರ್ಟ್ ನೈಜತೆಯನ್ನು ಪರಿಶೀಲನೆ ಮಾಡಿ ಎಂದು ಆದೇಶ ನೀಡಿದ್ದರೂ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಿಂದ ಭೂಗಳ್ಳರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮಲ್ಲೇಪುರ ಗ್ರಾಮಸ್ಥರಾದ ನಾರಾಯಣಸ್ವಾಮಿ, ಮುನಿರಾಜ ,ಮುನಿಶಾಮಪ್ಪ ಸೇರಿ ಭೂಸ್ವಾಧೀನದಲ್ಲಿರುವ ಗ್ರಾಮಸ್ಥರು ಭಾಗಿಯಾಗಿದ್ದರು.--------