ಸಾರಾಂಶ
ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಸುತ್ತಿದಂತೆ ಇತ್ತ ಬಿಜೆಪಿ ಯುವ ಘಟಕ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುತ್ತಿಗೆ ಹಾಕುವ ಯತ್ನ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಸುತ್ತಿದಂತೆ ಇತ್ತ ಬಿಜೆಪಿ ಯುವ ಘಟಕ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುತ್ತಿಗೆ ಹಾಕುವ ಯತ್ನ ನಡೆಸಿದ ಘಟನೆ ಶುಕ್ರವಾರ ನಡೆಯಿತು.ಬಿಜೆಪಿಯ ಎಂಎಲ್‌ಸಿ ಸಿ.ಟಿ.ರವಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶುಕ್ರವಾರ ಪ್ರತಿಭಟನೆ ಕೈಗೊಂಡ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಮಲ್ಲೇಶ್ವರದ ರಾಜ್ಯ ಬಿಜೆಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಯತ್ನ ನಡೆಸಿದರು. ಈ ವೇಳೆ ಪೊಲೀಸರು ಸೌಮ್ಯ ರೆಡ್ಡಿ ಸೇರಿ ಹಲವು ಮಹಿಳೆಯರನ್ನು ರಸ್ತೆ ಮಧ್ಯದಲ್ಲಿಯೇ ತಡೆದು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜ್ಯಾಧ್ಯಕ್ಷ ಧೀರಜ್ ಮುನಿರಾಜುಗೌಡ ನೇತೃತ್ವದಲ್ಲಿ ಕ್ವಿನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಯತ್ನಿಸಿದರು. ಪೊಲೀಸರು ಅವರನ್ನೂ ರಸ್ತೆ ಮಧ್ಯದಲ್ಲಿಯೇ ತಡೆದರು. ಪೊಲೀಸರು ಬಿಜೆಪಿಯ ಕಾರ್ಯಕರ್ತರನ್ನು ಬಸ್‌ನಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪ್ರತಿಭಟನಾಕಾರರಿದ್ದ ಬಸ್ ಮೇಲೆ ಮೊಟ್ಟೆ ದಾಳಿ ನಡೆಸಿ ಮಾಡಲಾಯಿತು. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಕೆಲವು ಬೈಕ್ ಸವಾರರು ಸಹ ಮೊಟ್ಟೆ ಏಟು ಅನುಭವಿಸಬೇಕಾದ ಪ್ರಸಂಗ ನಡೆಯಿತು.ಇದಕ್ಕೂ ಮುನ್ನ ಟಿ.ಸಿ.ರವಿ ಅವರನ್ನು ವಿಧಾನಪರಿಷತ್ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಬೇಕು ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮಹಿಳಾ ಆಯೋಗಕ್ಕೆ ದೂರು:ಪ್ರತಿಭಟನೆ ಬಳಿಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದ ಬಳಸಿರುವ ಸಿ.ಟಿ.ರವಿ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದಲ್ಲಿ ಶುಕ್ರವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರಿಗೆ ದೂರು ಸಲ್ಲಿಸಲಾಯಿತು.