ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಎಂಡಿಎ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ನಡು ರಸ್ತೆಯಲ್ಲಿಯೇ ತಡೆದು ವಶಕ್ಕೆ ಪಡೆದರು.ಎಂಡಿಎನಲ್ಲಿ ನಡೆದಿರುವ 50:50 ನಿವೇಶನ ಹಂಚಿಕೆ ಹಗರಣದಲ್ಲಿ ಶಾಮೀಲಾದ ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಯುವ ಮೋರ್ಚಾ ಕಾರ್ಯಕರ್ತರು ನಡೆಸಿದ ಹೋರಾಟ ತೀವ್ರವಾಗಿತ್ತು.
ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ರಾಮಸ್ವಾಮಿ ವೃತ್ತದಲ್ಲಿ ಕೆಲಕಾಲ ಪ್ರತಿಭಟಿಸಿದರು. ನಂತರ ಎಂಡಿಎ ಕಚೇರಿ ಕಡೆಗೆ ಮೆರವಣಿಗೆ ಮುಖಮಾಡಿತು. ಈ ವೇಳೆ ಮಹಾರಾಜ ಕಾಲೇಜಿನ ಗೇಟ್ ಬಳಿಯೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಾ ಮೆರವಣಿಗೆ ತಡೆದರು.ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪೊಲೀಸರೊಡನೆ ವಾಗ್ವಾದಕ್ಕಿಳಿದರು. ಅಲ್ಲದೆ ರಸ್ತೆಯಲ್ಲಿಯೇ ಕುಳಿತು ಕೆಲಕಾಲ ಪ್ರತಿಭಟಿಸಿದರು. ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಡದಿದ್ದಾಗ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದರು.
ಇದಕ್ಕೂ ಮುನ್ನ ಅವರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ವಿರುದ್ಧವೂ ಧಿಕ್ಕಾರದ ಘೋಷಣೆ ಕೂಗಿದರು.ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವುದು ಸರಿಯಲ್ಲ. ನಿಯಮಗಳನ್ನು ಗಾಳಿಗೆ ತೂರಿ ಕೋಟ್ಯಂತರ ರೂ. ಅವ್ಯವಹಾರ ನಡೆಸಲಾಗಿದೆ. ಆದರೂ ಯಾರೊಬ್ಬರ ಮೇಲೂ ಇದುವರೆಗೂ ಕ್ರಮ ಜರುಗಿಸಿಲ್ಲ. ಇದರ ಹಿಂದೆ ಯಾರೆಲ್ಲರ ಷಡ್ಯಂತ್ರ ಇರುವುದೋ ಅವರೆಲ್ಲರನ್ನೂ ತನಿಖೆಗೆ ಒಳಪಡಿಸಬೇಕು ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್, ರಘು, ಜೋಗಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ.ವಿ. ಮಂಜುನಾಥ್, ಎಂ. ಲಕ್ಷ್ಮೀ, ಮಹೇಶ್‌ರಾಜೇ ಅರಸ್, ಗೆಜ್ಜಗನಹಳ್ಳಿ ಮಹೇಶ್ ಮೊದಲಾದವರು ಇದ್ದರು.ಹಿರಿಯ ನಾಯಕರು ಗೈರು:
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಣಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ನಾಯಕರು ಮತ್ತು ಸ್ಥಳೀಯ ಕೆಲ ನಾಯಕರು ಪ್ರತಿಭಟನೆಗೆ ಗೈರು ಹಾಜರಾದರು.ಇಂದಿನ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು.
ಬಿಗಿ ಪೊಲೀಸ್‌ಬಂದೋಬಸ್ತ್:ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ, ಎಂಡಿಎ ಕಚೇರಿಗೆ ಮುತ್ತಿಗೆ ಹಾಕುವ ವಿಷಯ ತಿಳಿದು ನಗರದ ಜೆ.ಎಲ್.ಬಿ ರಸ್ತೆಯಲ್ಲಿನ ಎಂಡಿಎ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.