- ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಮಾಲೀಕ ಬುಳ್ಳಿ ನಾಗರಾಜ್
- - -- ಸಾರಿಗೆ ಇಲಾಖೆಯಿಂದ ಒಪ್ಪಂದದ ಪತ್ರ ಬರೆದು ಕೊಡಿ ಎಂದ ಮಾಲೀಕ
- ಮಾಲೀಕರ ಮಾತಿಗೆ ಒಪ್ಪಲಾಗದೇ ಸ್ಥಳದಿಂದ ತೆರಳಿದ ಅಧಿಕಾರಿಗಳು- - -
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಕೆರೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದಲ್ಲಿ ಖಾಸಗಿ ನಿವೇಶನ ಇದ್ದು, ಈ ನಿವೇಶನದ ಮುಂಭಾಗದಲ್ಲಿ ತಾತ್ಕಾಲಿಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾದಾಗ ನಿವೇಶನದ ಮಾಲೀಕರು ಕಾಮಗಾರಿಯನ್ನು ತಡೆದು ಪ್ರತಿಭಟಿಸಿದ ಘಟನೆ ಮಂಗಳವಾರ ನಡೆಯಿತು.
ಈ ಸಂದರ್ಭದಲ್ಲಿ ನಿವೇಶನದ ಮಾಲೀಕ ಬುಳ್ಳಿ ನಾಗರಾಜ್ ಮಾತನಾಡಿ, ನಮ್ಮದು ವಾಣಿಜ್ಯ ಉದ್ದೇಶ ಹೊಂದಿರುವ ಖಾಸಗಿ ನಿವೇಶನವಾಗಿದೆ. ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಹೊಂದಿಕೊಂಡು ನಮ್ಮ ನಿವೇಶನ ಇದೆ. ವಾಹನಗಳ ನಿಲುಗಡೆಗೆ ಮತ್ತು ನಮ್ಮ ನಿವೇಶನಕ್ಕೆ ಹೋಗಿ ಬರುವ ರಸ್ತೆಗೆ ನಮ್ಮ ಜಾಗವನ್ನೇ ಬಿಟ್ಟಿದ್ದೇವೆ. ಈಗ ನಮ್ಮ ಜಾಗದಲ್ಲಿಯೇ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಿದರೆ ಹೇಗೆ ಎಂದು ಪುರಸಭೆ ಮತ್ತು ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಪ್ರಶ್ನಿಸಿದರು.ಸದರಿ ನಿವೇಶನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದು ಪುರಸಭೆಯಲ್ಲಿ ಅನುಮೋದನೆಗೊಂಡಿದೆ. ವಾಣಿಜ್ಯ ಬಳಕೆ ನಿವೇಶದಲ್ಲಿ ಸರ್ಕಾರಿ ಅಧಿಕಾರಿಗಳು ಅತಿಕ್ರಮವಾಗಿ ದೌರ್ಜನ್ಯದಿಂದ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲು ಮುಂದಾಗಿದ್ದು ಖಂಡನೀಯ ಎಂದರು.
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಆಸ್ತಿಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಆದರೆ ಯಾರದೋ ಒತ್ತಡಕ್ಕೆ ಮಣಿದು ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಸ್ಥಳೀಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ನಿವೇಶನದಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಲು ಈಗಾಗಲೇ ಕಾಮಗಾರಿ ಪ್ರಾರಂಭಿಸಿದ್ದು, ಅಧಿಕಾರಿಗಳು ದಬ್ಬಾಳಿಕೆ ನಡೆಸಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಹೊರಟಿದ್ದಾರೆ. ನಮ್ಮ ನಿವೇಶನದ ಮುಂದೆ ಯಾವುದೇ ಕಾರಣಕ್ಕೂ ನಿಲ್ದಾಣ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಪುರಸಭೆ ಮುಖ್ಯಾಧಿಕಾರಿ ಜೆ.ವಿ. ಮಂಜುನಾಥ್ ಮಾತನಾಡಿ, ಇದು ತಾತ್ಕಾಲಿಕ ನಿಲ್ದಾಣವನ್ನು ನಿರ್ಮಾಣ ಮಾಡಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸಹಕಾರ ನೀಡಬೇಕು ಎಂದರು. ಆಗ ನಿವೇಶನದ ಮಾಲೀಕರು ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಇಲಾಖೆಯಿಂದ ಒಪ್ಪಂದದ ಪತ್ರವನ್ನು ಬರೆದು ಕೊಡಿ ಎಂದರು. ಆಗ ಅಧಿಕಾರಿಗಳು ಅದನ್ನು ಒಪ್ಪದೇ ಸ್ಥಳದಿಂದ ನಿರ್ಗಮಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಕಂದಾಯ ಅಧಿಕಾರಿ ರಮೇಶ್ ಸೇರಿದಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಜರಿದ್ದರು.- - -
-16ಕೆಸಿಎನ್ಜಿ2: ಖಾಸಗಿ ನಿವೇಶನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣವನ್ನು ನಿರ್ಮಾಣ ವಿರೋಧಿಸಿ ನಿವೇಶನ ಮಾಲೀಕ ಬುಳ್ಳಿ ನಾಗರಾಜ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.