ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ವಿಶ್ವವಿದ್ಯಾಲಯ ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಎಚ್ಚರಿಸಿದರು.ಬಿಜೆಪಿ ಮತ್ತು ಯುವಮೋರ್ಚಾ ವತಿಯಿಂದ ಪಟ್ಟಣ ಜೇಸಿ ವೇದಿಕೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಬಡವರ, ರೈತರ, ಕೂಲಿ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕಾದ ಕೊಡಗಿನ ಜನರಿಂದ ಹಣ ಸಂಗ್ರಹಿಸಿ ವಿಶ್ವವಿದ್ಯಾಲಯ ನಡೆಸುತ್ತೇವೆ. ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಯಾವುದೇ ಅನುದಾನವನ್ನು ವಿವಿಗೆ ನೀಡಿಲ್ಲ. ಆದರೂ ವಿವಿಯಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣದಲ್ಲೇ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.೨೦ ವರ್ಷದ ಹೋರಾಟದ ಫಲವಾಗಿ ವಿವಿ ಸಿಕ್ಕಿದೆ. ೨೪೦ ಎಕ್ರೆ ಜಾಗವಿದೆ. ಸುಸಜ್ಜಿತ ಕಟ್ಟಡಗಳಿವೆ. ೨೦೧೦ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ೧೫ ಕೋಟಿ ರೂ. ಅನುದಾನ ನೀಡಿದೆ. ವಾರ್ಷಿಕವಾಗಿ ೩೭೪ ಕೋಟಿ ರೂ.ಗಳ ಅನುದಾನವನ್ನು ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಜನರೇ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದರೆ ವಿವಿಗೆ ಇರುವ ಕಂಟಕ ದೂರವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತ, ಕಾರ್ಮಿಕ, ಬಡವರ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಎಸ್‌ಸಿ, ಎಸ್‌ಟಿ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ದುರುಪಯೋಗಪಡಿಸಿಕೊಂಡಿದೆ. ಸಿ ಆ್ಯಂಡ್ ಡಿ ಭೂತ ಕಾಂಗ್ರೆಸ್ ಸರ್ಕಾರದ ಕೊಡುಗೆ ಆಗಿದೆ. ರೈತರ ಆಸ್ತಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಾದ ಅನಿವಾರ್ಯತೆಯನ್ನು ಸರ್ಕಾರ ಸೃಷ್ಟಿಸಿದೆ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ದೂರಿದರು.ಸಿ ಆ್ಯಂಡ್ ಡಿ ಭೂಮಿಯಲ್ಲಿ ತಾಲೂಕಿನ ಹೆಚ್ಚಿನ ಕುಟುಂಬಗಳು ಕೃಷಿ ಮಾಡುತ್ತಿದ್ದಾರೆ. ಆ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದರೆ ರೈತರು ಭೂರಹಿತರಾಗುತ್ತಾರೆ. ಬಿಜೆಪಿ ರೈತರ ಪರವಾಗಿ ಹೋರಾಟ ಮಾಡಲಿದೆ. ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಕೃತ್ಯಕ್ಕೆ ರಾಜ್ಯ ಸರ್ಕಾರ ಕೈ ಹಾಕಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಸೋಮವಾರಪೇಟೆ ಮಂಡಳ ಅಧ್ಯಕ್ಷ ಗೌತಮ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಮಡಿಕೇರಿ ಮಂಡಳ ಅಧ್ಯಕ್ಷ ಉಮೇಶ್, ಪಕ್ಷದ ಪ್ರಮುಖರಾದ ಬಿ.ಬಿ.ಭಾರತೀಶ್, ಮನುಕುಮಾರ್ ರೈ, ಎಚ್.ಕೆ.ಮಾದಪ್ಪ, ವಿ.ಕೆ.ಲೋಕೇಶ್, ತಂಗಮ್ಮ, ಪಿ.ಕೆ.ಚಂದ್ರು, ರವಿ, ಶರತ್‌ಚಂದ್ರ ಇದ್ದರು.