ಮಾಗಡಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮಾಯಕರ ಹಾಗೂ ವಾರಸುದಾರರಿಲ್ಲದ ಕೋಟ್ಯಂತರ ರು. ಮೌಲ್ಯದ ಭೂಮಿಯನ್ನು ಕಬಳಿಸುವ ಜಾಲವೊಂದು ಸಕ್ರಿಯವಾಗಿ ತೊಡಗಿಕೊಂಡಿದೆ ಎಂದು ತಾಪಂ ಮಾಜಿ ಸದಸ್ಯ ಜಯರಾಮ್ ಆರೋಪಿಸಿದರು
ಮಾಗಡಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮಾಯಕರ ಹಾಗೂ ವಾರಸುದಾರರಿಲ್ಲದ ಕೋಟ್ಯಂತರ ರು. ಮೌಲ್ಯದ ಭೂಮಿಯನ್ನು ಕಬಳಿಸುವ ಜಾಲವೊಂದು ಸಕ್ರಿಯವಾಗಿ ತೊಡಗಿಕೊಂಡಿದೆ ಎಂದು ತಾಪಂ ಮಾಜಿ ಸದಸ್ಯ ಜಯರಾಮ್ ಆರೋಪಿಸಿದರು.
ಪಟ್ಟಣದಲ್ಲಿ ನಕಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ತಾಲೂಕಿನ ಪುರ ಗ್ರಾಮದಲ್ಲಿ ನಡೆದಿರುವ ಜಮೀನಿನ ಅಕ್ರಮ ನೋಂದಣಿ ಪ್ರಕರಣವನ್ನು ದಾಖಲೆ ಸಮೇತ ಬಹಿರಂಗಪಡಿಸಿದರು. ಪುರ ಗ್ರಾಮದ ಸರ್ವೇ ನಂ. 43/4ರಲ್ಲಿರುವ 2.34 ಎಕರೆ ಜಮೀನು ಮೂಲತಃ ಚೆಲ್ಲಮ್ಮ ಕೋಂ ರಂಗಯ್ಯಂಗಾರ್ ಅವರಿಗೆ ಸೇರಿದ್ದಾಗಿದೆ. ಈ ಜಮೀನಿನ ವಾರಸುದಾರರು ಹಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಪ್ರಸ್ತುತ ಈ ಜಮೀನು ಭರ್ಗಾವತಿ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿದ್ದು, ಮುಖ್ಯರಸ್ತೆಗೆ ಹೊಂದಿಕೊಂಡಂತೆ 5 ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿದೆ. ಈ ಜಮೀನಿನಲ್ಲಿ ಪ್ರಸ್ತುತ ವೆಂಕಟಸ್ವಾಮಯ್ಯ ಮತ್ತು ಕುಟುಂಬಸ್ಥರು ಸಾಗುವಳಿ ಮಾಡುತ್ತಿದ್ದಾರೆ.ನಕಲಿ ಆಧಾರ್ ಸೃಷ್ಟಿಸಿ ಅಕ್ರಮ ನೋಂದಣಿ:
ಈ ಜಮೀನನ್ನು ಕಬಳಿಸಲು ಪುರ ಗ್ರಾಮದ ನಿವಾಸಿ ಲಕ್ಷ್ಮಮ್ಮ ಕೋಂ ರಂಗಯ್ಯ ಮೂಲ ಆಧಾರ್ ಸಂಖ್ಯೆಯನ್ನೇ ಬಳಸಿಕೊಂಡು, ಫೋಟೋಶಾಪ್ ಮೂಲಕ ಮೃತ ಚೆಲ್ಲಮ್ಮ ಬಿನ್ ರಂಗಯ್ಯಂಗಾರ್ ಹೆಸರಿನ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲಾಗಿದೆ. ಬಳಿಕ ಮೃತ ಮಹಿಳೆಯ ಜಾಗದಲ್ಲಿ ಲಕ್ಷ್ಮಮ್ಮರನ್ನು ನಿಲ್ಲಿಸಿ, ಅವರ ಸ್ವಂತ ಸೊಸೆ ಗೀತಾ ಕೋಂ ನಾಗರಾಜ್ ಹೆಸರಿಗೆ 24 ಆಗಸ್ಟ್ರಂದು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ರಮ ಕ್ರಯಪತ್ರ ನೋಂದಣಿ ಮಾಡಿಸಲಾಗಿದೆ ಎಂದು ಜಯರಾಮ್ ಆರೋಪಿಸಿದರು.ಅಷ್ಟೇ ಅಲ್ಲದೆ, ನಕಲಿ ದಾಖಲೆಗಳ ಆಧಾರದ ಮೇಲೆ ಆರ್‌ಟಿಸಿ (ಪಹಣಿ) ಬದಲಾಯಿಸಿಕೊಂಡು, ಮಾಡಬಾಳ್ ವಿಎಸ್‌ಎಸ್‌ಎನ್ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ಜೊತೆಗೆ 80 ಲಕ್ಷಕ್ಕೆ ಜಮೀನು ಮಾರಾಟ ಮಾಡಲು ಮುಂದಾಗಿ 1 ಲಕ್ಷ ಮುಂಗಡ ಹಣವನ್ನೂ ಪಡೆಯಲಾಗಿತ್ತು. ಆದರೆ ಸ್ಥಳೀಯರ ಹಾಗೂ ವಿಎಸ್‌ಎಸ್‌ಎನ್ ಸಿಬ್ಬಂದಿ ಜಾಗರೂಕತೆಯಿಂದ ಈ ವಂಚನೆ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.
15 ದಿನಗಳ ಗಡುವು: ಪ್ರತಿಭಟನೆ ಎಚ್ಚರಿಕೆವೀರ ಕನ್ನಡಿಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜೇಶ್ ಕರಣ್ ಮಾತನಾಡಿ, ಈ ಜಮೀನನ್ನು ಕೂಡಲೇ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಶಾಲೆ, ಆಸ್ಪತ್ರೆ, ಅಂಗನವಾಡಿ ಅಥವಾ ನಿವೇಶನ ರಹಿತ ಬಡವರಿಗೆ ಹಂಚಬೇಕು. ಈ ಜಾಲದಲ್ಲಿ ಭಾಗಿಯಾಗಿರುವ ಲಕ್ಷ್ಮಮ್ಮ, ಗೀತಾ ಹಾಗೂ ನಕಲಿ ಸಾಕ್ಷಿದಾರರಾದ ಗಂಗಾಧರ, ಮಹಾದೇವಯ್ಯ, ವಿಜಯಕುಮಾರ, ಜಯರಾಮ ಸೇರಿದಂತೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಸುಮೊಟೊ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು. ಮುಂದಿನ 15–20 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ, ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜ್ಯೋತಿನಗರದ ಸ್ವಾಮಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.