ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಹಗರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಸಾಲಗಾಮೆ ಹೋಬಳಿಯ ಬೈಲಳ್ಳಿ ಗ್ರಾಮದ ರವಿಕುಮಾರ್‌ ಬಂಧಿತ ಆರೋಪಿಯಾಗಿದ್ದು, ಆರೋಪಿಯಿಂದ ಎರಡು ಕಾಡು ಹಂದಿಗಳನ್ನು ಬೇಟೆಯಾಡಿ ಪಡೆದಿದ್ದ ಸುಮಾರು 11 ಕೇಜಿ ಹಸಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ವಲಯ ಅರಣ್ಯಾಧಿಕಾರಿ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹಗರೆ ರಕ್ಷಿತ ಅರಣ್ಯದ ಗಡಿಯ ಹಗರೆ–ಹೊಲಬಗೆರೆ ರಸ್ತೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದರು. ಕಾರ್ಯಾಚರಣೆಯ ವೇಳೆ ಒಂದು ಕಿಯಾ ಕಾರು, ಮೂರು ಡಿಬಿಬಿಎಲ್ ಗನ್‌ಗಳು ಹಾಗೂ ಇತರೆ ಬೇಟೆ ಉಪಕರಣಗಳನ್ನು ವಶಕ್ಕೆ ಪಡೆದು ಅಮಾನತುಪಡಿಸಲಾಗಿದೆ. ಪ್ರಕರಣ ಸಂಬಂಧ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದ್ದು, ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಬೇಟೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಆರ್‌. ಎಫ್. ಯತೀಶ್, ಡಿಆರ್‌ಎಫ್ಒ ಮೋಹನ್ ಕುಮಾರ್‌ ಹಾಗೂ ಸಿಬ್ಬಂದಿಯಾದ ಸತೀಶ್, ಮಂಜುನಾಥ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.