ಎಸ್‌ಐಆರ್ ಪ್ರಕ್ರಿಯೆ ಮುಖಾಂತರ ಬಿಜೆಪಿ ತಮಗೆ ಬಾರದೇ ಇರುವ ಮತಗಳನ್ನು ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಗಂಭೀರವಾಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಸ್‌ಐಆರ್ ಪ್ರಕ್ರಿಯೆ ಮುಖಾಂತರ ಬಿಜೆಪಿ ತಮಗೆ ಬಾರದೇ ಇರುವ ಮತಗಳನ್ನು ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಗಂಭೀರವಾಗಿ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಅತ್ಯಂತ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 15 ಲಕ್ಷ ಮತದಾರರಿದ್ದು, ಈ ಪೈಕಿ ಶೇ.90 ರಷ್ಟು ಫಾರಂಗಳನ್ನು ಬಿಎಲ್‌ಒಗಳು ಈಗಾಗಲೇ ವಿತರಿಸಿದ್ದಾರೆ. ಅದರಲ್ಲಿ ಸರಿಸುಮಾರು 7 ಲಕ್ಷ ಫಾರಂಗಳನ್ನು ಯಶಸ್ವಿಯಾಗಿ ಭರ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಮತ್ತು ಚುನಾವಣಾ ಆಯೋಗ ಅವಸರದಲ್ಲಿ ಈ ನಿರ್ಧಾರವನ್ನು ಕೈಗೊಂಡಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವವರನ್ನೇ ಗುರಿಯಾಗಿಟ್ಟುಕೊಂಡು ಅವರನ್ನು ಹೊರಗಿಡುವಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷ ಈಗ ಎಚ್ಚೆತ್ತುಕೊಂಡಿದೆ.ಅವರ ಯೋಚನೆ ಈಗ ಸಫಲವಾಗುವುದಿಲ್ಲ ಅದು ಅವರಿಗೆ ಈಗಾಗಲೇ ಕಸಿವಿಸಿ ತಂದಿದೆ. ಇನ್ನು ಕೇವಲ 16 ದಿನಗಳು ಬಾಕಿ ಉಳಿದಿವೆ. ಅಷ್ಟರೊಳಗೆ ಎಸ್.ಐ.ಆರ್. ಪ್ರಕ್ರಿಯೆಯನ್ನು ಸಮರ್ಪಕವಾಗಿ ಮುಗಿಸಬೇಕಾಗಿದೆ. ಈಗ ನೀಡಿರುವ ಸಮಯ ಸಾಲದು ಅದನ್ನು ವಿಸ್ತರಿಸಬೇಕೆಂದು ನಾವು ಕೂಡ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.

ರಾಜ್ಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಜಾರಿಯಲ್ಲಿದ್ದು, ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಕೈಬಿಟ್ಟು ಹೋಗಬಾರದು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ಬಿಎಲ್‌ಒಗಳು ಅತ್ಯಂತ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಮತ್ತು ಫಾರಂಗಳನ್ನು ಭರ್ತಿ ಮಾಡಲು ಸೂಕ್ತ ಸಹಕಾರ ನೀಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಾರ್ವಜನಿಕರಿಂದ ಫಾರಂಗಳನ್ನು ಭರ್ತಿ ಮಾಡಿಸಿ ವಾಪಸ್ ತಂದು ಕೊಡುತ್ತಿದ್ದಾರೆ. ಅರ್ಹ ಮತದಾರರು ಪಟ್ಟಿಯಿಂದ ವಂಚಿತರಾಗದಂತೆ ನಾವು ನಿಗಾ ವಹಿಸುತ್ತಿದ್ದೇವೆ. ಆದರೆ, ಬಿಜೆಪಿ ಪಿಸಿಆರ್ ಪ್ರಮಾಣಪತ್ರದ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಾ ಜನರ ದಾರಿ ತಪ್ಪಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ಎಸ್‌ಐಆರ್‌ಗೆ ಬೇಕಾದ ಎಲ್ಲ ಅಽಕೃತ ದಾಖಲೆಗಳನ್ನು ನಾವು ಒದಗಿಸಲಿದ್ದೇವೆ. ಬಿಎಲ್‌ಒಗಳು ಮಾಡುತ್ತಿರುವ ಉತ್ತಮ ಕಾರ್ಯ ಶ್ಲಾಘನೀಯವಾಗಿದ್ದು, ಫಾರಂ ಪಡೆದುಕೊಂಡಿರುವ ಎಲ್ಲಾ ನಾಗರಿಕರು ಕಡ್ಡಾಯವಾಗಿ ಎನ್ಯುಮರೇಶನ್ ಫಾರಂಗಳನ್ನು ಭರ್ತಿ ಮಾಡಿ ಹಿಂದಿರುಗಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಕಲೀಂ ಪಾಶಾ, ಜಿ.ಪಲ್ಲವಿ, ಚೇತನ್ ಗೌಡ, ಡಾ.ಶ್ರೀನಿವಾಸ್ ಕರಿಯಣ್ಣ, ಶಿವಣ್ಣ ಹಾಗೂ ಜಯಣ್ಣ ಉಪಸ್ಥಿತರಿದ್ದರು.

---------------

ಪೋಟೋ: 15ಎಸ್‌ಎಂಜಿಕೆಪಿ08

ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿದರು.