ಹಸುಳೆ ಮಾರಾಟಕ್ಕೆ ಯತ್ನ : ಐವರ ಬಂಧನ

| Published : Jun 10 2024, 12:49 AM IST

ಸಾರಾಂಶ

ಹಸುಳೆಯನ್ನು ಮಾರಾಟ ಮಾಡುತ್ತಿದ್ದ ಐವರ ಗ್ಯಾಂಗ್‌ನನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 30 ದಿನದ ಮಗುವನ್ನು ರಕ್ಷಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿಹಸುಳೆಯನ್ನು ಮಾರಾಟ ಮಾಡುತ್ತಿದ್ದ ಐವರ ಗ್ಯಾಂಗ್‌ನನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 30 ದಿನದ ಮಗುವನ್ನು ರಕ್ಷಣೆ ಮಾಡಲಾಗಿದೆ. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಮಹಾದೇವಿ ಅಲಿಯಾಸ್‌ ಪ್ರಿಯಾಂಕಾ ಬಾಹುಬಲಿ ಜೈನರ್‌, ಮೂಲತಃ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ, ಸದ್ಯ ಕಿತ್ತೂರು ಪಟ್ಟಣದ ಸೋಮವಾರ ಪೇಠ ನಿವಾಸಿ ಡಾ.ಅಬ್ದುಲ್‌ಗಫಾರ ಹುಸೇನಸಾಬ ಲಾಡಖಾನ, ಬೈಲಹೊಂಗಲ ತಾಲೂಕಿನ ತುರಕರ ಶಿಗೀಹಳ್ಳಿಯ ಚಂದನ ಗಿರಿಮಲ್ಲಪ್ಪ ಸುಬೇದಾರ, ಸಂಪಗಾಂವಿ ಗ್ರಾಮದ ಪವಿತ್ರಾ ಸೋಮಪ್ಪ ಮಡಿವಾಳರ ಹಾಗೂ ಧಾರವಾಡ ತಾಲೂಕಿನ ಹೊಸಟ್ಟಿ ಗ್ರಾಮದ ಪ್ರವೀಣ ಮಂಜುನಾಥ ಮಡಿವಾಳರ ಬಂಧಿತರು.ಕೇವಲ 30 ದಿನದ ಹೆಣ್ಣು ಮಗುವನ್ನು ಡಾ.ಅಬ್ದುಲ್‌ಗಫಾರ ಲಾಡಖಾನ ಎಂಬುವನಿಗೆ ಮಹಾದೇವಿ ಅಲಿಯಾಸ್‌ ಪ್ರಿಯಾಂಕಾ ಜೈನರ್‌ ₹60 ಸಾವಿರ ಹಣ ಕೊಟ್ಟು ಖರೀದಿಸಿದ್ದಾಳೆ. ಬಳಿಕ ಈ ಮಗುವನ್ನು ಬೆಳಗಾವಿ ನಗರದಲ್ಲಿ ಮಾರಾಟ ಮಾಡಲು ಮುಂದಾಗಿದ್ದಾಳೆ. ಹೆಣ್ಣು ಮಗುವ ಮಾರಾಟ ದಂಧೆಯ ಮಾಹಿತಿ ಪಡೆದ ರಾಮತೀರ್ಥ ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜ ರಾಜಕುಮಾರ ಸಿಂಗಪ್ಪಾ ರಾಠೋಡ ಈ ಕುರಿತು ನಗರದ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಗು ಮಾರಾಟ ಗ್ಯಾಂಗ್‌ ಬಂಧನಕ್ಕೆ ಬಲೆ ಬಿಸಿದ್ದಾರೆ. ಪೊಲೀಸರ ಮಾರ್ಗದರ್ಶನದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜ ರಾಜಕುಮಾರ ರಾಠೋಡ ರಹಸ್ಯ ಕಾರ್ಯಾಚರಣೆ ಮಾಡಿ, ನಾವೇ ₹ 1ಲಕ್ಷ 40 ಸಾವಿರಕ್ಕೆ ಈ ಹೆಣ್ಣು ಮಗುವನ್ನು ಖರೀದಿಸುವುದಾಗಿ ಹೇಳಿ ನಂಬಿಸಿದ್ದಾರೆ. ಈ ಮಾತನ್ನು ನಂಬಿದ ಮಹಾದೇವಿ ಅಲಿಯಾಸ್‌ ಪ್ರಿಯಾಂಕಾ ಜೈನರ್‌ ಮಗುವನ್ನು ಮಾರಾಟ ಮಾಡಲು ಬಂದ ಸಮಯದಲ್ಲಿ ಪೊಲೀಸರು ದಾಳಿ ನಡೆಸಿ ಆಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ತನ್ನೊಂದಿಗೆ ಇನ್ನು ನಾಲ್ಕು ಜನರುರಿರುವ ಕುರಿತು ಮಾಹಿತಿ ನೀಡಿದ್ದರಿಂದ ಪೊಲೀಸರು ಇನ್ನೂಳಿದ ಆರೋಪಿಗಳನ್ನು ಹಡೆಮುರಿ ಕಟ್ಟಿದ್ದಾರೆ.ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ ಮಾರ್ಬನ್ಯಾಂಗ್, ಡಿಸಿಪಿಗಳಾದ ರೋಹನ ಜಗದೀಶ, ಸ್ನೇಹಾ ಪಿ.ವಿ ಮಾರ್ಗದರ್ಶನದಲ್ಲಿ ಮಾಳಮಾರುತಿ ಠಾಣೆಯ ಪೊಲೀಸ್‌ ಇನಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ, ಪಿಎಸೈ ರಾಮಗೌಡ ಸಂಕನಾಳ, ನೇತೃತ್ವದಲ್ಲಿ ಸಿಬ್ಬಂದಿ ಕೆ.ಬಿ.ಗೌರಾಣಿ ಮತ್ತು ಜಾಸ್ಮೀನ ಮುಲ್ಲಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.