ಸಾರಾಂಶ
ಕುಮಟಾ: ಪಟ್ಟಣದ ಹಲವು ಚಿನ್ನಾಭರಣ ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣಗಳನ್ನು ಎಗರಿಸುತ್ತಿದ್ದ ಸಂಶಯದ ಹಿನ್ನೆಲೆ ಚಿನ್ನಾಭರಣ ಅಂಗಡಿಕಾರರ ದೂರಿನ ಮೇರೆಗೆ ಕುಮಟಾ ಪೊಲೀಸರು ೮ ಜನರನ್ನು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ತಾಂಡಾ ನಿವಾಸಿಗಳಾದ ಕವಿತಾ ಸಂಜೀವ ನಾಯ್ಕ(೩೧), ಚಂದುಬಾಯಿ ಗಣೇಶ ರಾಠೋಡ(೪೫), ಶೀಲಾಬಾಯಿ ರಾಜು ರಾಠೋಡ(೪೦), ಜನಾಬಾಯಿ ಪವಾರ(೪೦), ಸಂಜೀವ ನಾಯ್ಕ(೪೦), ಗಣೇಶ ಭೀಮಸಿಂಗ ರಾಠೋಡ(೪೮), ಕಿರಣ ತಾರಾಸಿಂಗ ನಾಯ್ಕ(೨೮), ವಿನೋಬ ಪವಾರ(೨೫) ಬಂಧಿತ ಆರೋಪಿಗಳು.ವಿಜಯಪುರದಿಂದ ಬರುತ್ತಿದ್ದ ಈ ೮ ಜನ ಆರೋಪಿಗಳ ತಂಡ ಈ ಹಿಂದೆ ಕುಮಟಾದ ಹಲವೆಡೆ ಎರಡು ತಂಡಗಳಾಗಿ ಹಲವು ಚಿನ್ನಾಭರಣ ಅಂಗಡಿಗಳಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ್ದು ಆಭರಣ ಎಗರಿಸಲು ವಿಫಲ ಯತ್ನ ಮಾಡಿದ್ದರು. ಮೂರೂರು ಕ್ರಾಸ್ ಬಳಿಯ ಸತ್ಯಸಾಯಿ ಜುವೆಲರಿ, ಬಸ್ ನಿಲ್ದಾಣ ಬಳಿಯ ಗುರುಕೃಪಾ ಜುವೆಲರಿ, ಮಾಸ್ತಿಕಟ್ಟೆಯ ಮಹಾಸತಿ ಜುವೆಲರಿ, ವೈಭವ ಪ್ಯಾಲೇಸ್ ಬಳಿಯ ಮುಖ್ಯಪ್ರಾಣ ಜುವೆಲರಿ, ಉಪ್ಪಿನಗಣಪತಿ ರಸ್ತೆಯ ಸಾಯಿಶ್ರದ್ಧಾ ಜುವೆಲರಿ, ಬಸ್ತಿಪೇಟೆಯ ಶಂಕರ ನಾರಾಯಣ ಜುವೆಲರಿ, ಕುಂಭೇಶ್ವರ ರಸ್ತೆಯ ಕುಂಭೇಶ್ವರ ಜುವೆಲರಿಗಳಲ್ಲಿ ಕೈಚಳಕ ಪ್ರದರ್ಶಿಸಿದರೂ ಆಭರಣ ಎಗರಿಸಲಾಗಿರಲಿಲ್ಲ.
ಈ ಬಗ್ಗೆ ತಮ್ಮ ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ಪಟ್ಟಣದ ಚಿನ್ನಾಭರಣ ಅಂಗಡಿಕಾರರು, ಪೊಲೀಸರಿಗೂ ಮಾಹಿತಿ ನೀಡಿದ್ದರು. ಜುವೆಲರಿ ಅಂಗಡಿಗಳಲ್ಲಿ ಅಳವಡಿಸಿದ್ದ ಸಿಸಿ ಕೆಮೆರಾ ಪರಿಶೀಲನೆ ವೇಳೆ ಅನುಮಾನ ಖಚಿತಗೊಂಡ ಹಿನ್ನಲೆ ಪೊಲೀಸರು ತನಿಖೆ ನಡೆಸಿದ್ದರು.ಜೂ. ೭ರಂದು ೨ ಸ್ವಿಫ್ಟ್ ಕಾರುಗಳಲ್ಲಿ ಕುಮಟಾಕ್ಕೆ ಬಂದ ವಿಜಯಪುರದ ಅದೇ ಆರೋಪಿಗಳ ೮ ಜನರ ತಂಡ ಕುಂಭೇಶ್ವರ ರಸ್ತೆಯಲ್ಲಿರುವ ಎದುರಿನ ಮಸೀದಿ ಬಳಿಯ ಸ್ವಾಗತ ಜ್ಯುವೆಲರ್ಸ್ ಅಂಗಡಿಯನ್ನು ಪ್ರವೇಶಿಸಿದ್ದು, ಮಾಹಿತಿ ಪಡೆದ ಪೊಲೀಸರು ತಕ್ಷಣ ಬಂದು ನಾಲ್ವರು ಮಹಿಳೆಯರು, ನಾಲ್ವರು ಪುರುಷರಿದ್ದ ಸಂಪೂರ್ಣ ತಂಡವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ತಂಡ ಬೇರೆ ಪ್ರದೇಶಗಳಲ್ಲಿ ಅಂಗಡಿಗಳಿಂದ ಚಿನ್ನಾಭರಣ ಎಗರಿಸಿರುವ ಗುಮಾನಿ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ. ಪಟ್ಟಣದ ಚಿನ್ನಾಭರಣ ಅಂಗಡಿಕಾರರ ಸಂಘಟಿತ ಜಾಗೃತ ನಡೆಯಿಂದಾಗಿ ಕಳುವಿನ ಉದ್ದೇಶದಿಂದ ಬಂದಿದ್ದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.