ಪ್ರೊ.ಬಿಕೆ ಹೋರಾಟಗಳು ವ್ಯವಸ್ಥೆ ಬದಲಾವಣೆಗೆ ಕಾರಣವಾದವು: ಬಿ.ಪಿ.ತಿಪ್ಪೇಸ್ವಾಮಿ

| Published : Jun 10 2024, 12:48 AM IST

ಪ್ರೊ.ಬಿಕೆ ಹೋರಾಟಗಳು ವ್ಯವಸ್ಥೆ ಬದಲಾವಣೆಗೆ ಕಾರಣವಾದವು: ಬಿ.ಪಿ.ತಿಪ್ಪೇಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕಕ್ಕೆ ಅಂಬೇಡ್ಕರ್‌ರನ್ನು ಪರಿಚಯಿಸಿದ್ದು ಮಾತ್ರವಲ್ಲ ಶೋಷಿತರಲ್ಲಿ ಅವ್ವ ಸಂಸ್ಕೃತಿ ಮೈತ್ರಿಯನ್ನು ಮುನ್ನಡೆಸಿದ ಕೀರ್ತಿಯು ಪ್ರೊ.ಬಿಕೆ ಯವರಿಗೆ ಸಲ್ಲುತ್ತದೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಮಾಜವಾದಿ ಚಳುವಳಿಯಿಂದ ಹೊರ ಬಂದ ಪ್ರೊ.ಬಿ.ಕೃಷ್ಣಪ್ಪರವರು ದಲಿತ ಲೇಖಕ ಕಲಾವಿದರ ಯುವ ಒಕ್ಕೂಟ ಹಾಗೂ ಭದ್ರಾವತಿ ದಲಿತ ಸಂಘಟನೆ ಸೇರಿಸಿ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿ ಮೊದಲ ರಾಜ್ಯ ಸಂಚಾಲಕರಾದರು ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರೊ.ಬಿಕೆ ರವರು ದಲಿತ ಮತ್ತು ದಲಿತೇತರ ಶೋಷಿತ ಸಮುದಾಯ ಒಟ್ಟುಗೂಡಿಸಿಕೊಂಡು ಸಂಘಟನೆ ಕಟ್ಟಿದ ರೀತಿ, ಸೈದ್ಧಾಂತಿಕವಾಗಿ ಅವರಿಗಿದ್ದ ಬದ್ಧತೆ ಮತ್ತು ವೈಯಕ್ತಿಕವಾಗಿ ಪ್ರಾಮಾಣಿಕರಾಗಿದ್ದರಿಂದ ಕರ್ನಾಟಕದ ದಲಿತರು ಅವರನ್ನು ತಮ್ಮ ನಾಯಕನನ್ನಾಗಿ ಒಪ್ಪಿಕೊಂಡರು.

ಬಿಕೆ ನೇತೃತ್ವದಲ್ಲಿ ದಲಿತ ಚಳುವಳಿ ರೂಪಿಸಿದ ಹೋರಾಟಗಳು ಕೇವಲ ದಲಿತ ಸಮುದಾಯದ ಮೇಲಾಗುವ ಅನ್ಯಾಯ, ದೌರ್ಜನ್ಯ ವಿರುದ್ಧ ಪ್ರತಿಭಟಿಸುವುದಕ್ಕಷ್ಟೇ ಸೀಮಿತವಾಗಲಿಲ್ಲ. ಅವರ ಹೋರಾಟಗಳು ಸಮಾಜದಲ್ಲಿ ಭೂಮಿ, ವಿದ್ಯೆ, ಉದ್ಯೋಗದಂತಹ ಕ್ಷೇತ್ರಗಳಲ್ಲಿ ಬದಲಾವಣೆ ತರಬಲ್ಲ ಯೋಜನೆಗಳಾಗಿ ಜಾರಿಯಾಗುವುದಕ್ಕೆ ಕಾರಣವಾದವು. ಕರ್ನಾಟಕದ ವಿವಿಧ ಭಾಗಗಳಲ್ಲಿ ದಸಂಸ ನಡೆಸಿದ ಹೋರಾಟಗಳು ಸಾವಿರಾರು ಎಕರೆ ಭೂಮಿ ಹಂಚಿಕೆಯಾಗಲು ಕಾರಣವಾದವು. ದಸಂಸ ಹೋರಾಟದಿಂದ ಸ್ಥಾಪನೆಯಾದ ವಸತಿ ಶಾಲೆಗಳು, ದೊರಕಿಸಿಕೊಟ್ಟ ಸರ್ಕಾರಿ ಉದ್ಯೋಗಗಳು, ಕೇವಲ ದಲಿತ ಸಮುದಾಯಕ್ಕಷ್ಟೇ ಅಲ್ಲದೆ ಒಟ್ಟು ಸಮಾಜದ ಬದಲಾವಣೆಗೆ ಕಾರಣವಾದವು.

ವಿಶ್ವ ಮಟ್ಟದ ಪ್ರಾಮುಖ್ಯತೆ ಪಡೆದಿದ್ದ ಚಂದ್ರಗುತ್ತಿ ಬೆತ್ತಲೆ ಸೇವೆ ಹೋರಾಟವು ಮಹಿಳೆಯರ ವಿಮೋಚನೆ ಹೋರಾಟದ ಮೇರು ದಾಖಲೆಯಾಗಿದೆ. ಈ ಹೋರಾಟದಲ್ಲಿ ನಾನು ಕೂಡಾ ಭಾಗಿಯಾಗಿದ್ದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಅಂಬೇಡ್ಕರ್ ದೃಷ್ಟಿಕೋನದಿಂದ ಮಾತ್ರ ಸಮಾನತೆ ಸಮಾಜ ಸ್ಥಾಪಿಸಲು ಸಾಧ್ಯವೆಂದು ನಂಬಿದ್ದ ಪ್ರೊ.ಬಿಕೆ ಅಂತ್ಯದಲ್ಲಿ ಬಿಎಸ್‌ಪಿ ಪಕ್ಷ ಸೇರಿದರಾದರು ತಮ್ಮ ಜೀವಿತದ ಅವಧಿಯಲ್ಲಿ ನಿರೀಕ್ಷಿತ ಫಲ ಕಾಣಲಿಲ್ಲ. ಅವರು ರೂಪಿಸಿದ ದಲಿತ ಹೋರಾಟಕ್ಕೆ ಜೀವ ತುಂಬಿ ಸಾಂಸ್ಕೃತಿಕವಾಗಿ ಹೆಗಲಿಗೆ ಹೆಗಲು ಕೊಟ್ಟಂತಹ ದೇವನೂರು ಮಹಾದೇವ, ದಲಿತ ಕವಿ ಸಿದ್ದಲಿಂಗಯ್ಯ, ಕೆ.ಬಿ.ಸಿದ್ದಯ್ಯ, ಸಿ.ಕೆ ಮಹೇಶ್, ಕೋಟಗಾನಹಳ್ಳಿ ರಾಮಯ್ಯ,ಎಚ್ ಗೋವಿಂದಯ್ಯರವರುಗಳ ಕೊಡುಗೆಯೂ ಅನನ್ಯವಾದದ್ದು ಎಂದರು.

ಕರ್ನಾಟಕಕ್ಕೆ ಅಂಬೇಡ್ಕರ್‌ರನ್ನು ಪರಿಚಯಿಸಿದ್ದು ಮಾತ್ರವಲ್ಲ ಶೋಷಿತರಲ್ಲಿ ಅವ್ವ ಸಂಸ್ಕೃತಿ ಮೈತ್ರಿಯನ್ನು ಮುನ್ನಡೆಸಿದ ಕೀರ್ತಿಯು ಪ್ರೊ.ಬಿಕೆ ಯವರಿಗೆ ಸಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಈ.ನಾಗೇಂದ್ರಪ್ಪ, ಚಂದ್ರಪ್ಪ, ಶಿಕ್ಷಕಿಯರಾದ ಶಕುಂತಲಾ, ಗಿರಿಜಾ, ಪುಲೆ ಅಧ್ಯಯನ ಕೇಂದ್ರದ ಮುಖ್ಯಸ್ಥ ಹನುಮಂತಪ್ಪ ಮಾತನಾಡಿದರು. ಬುರುಜನರೊಪ್ಪ ಹನುಮಂತಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ, ಮಂಜಪ್ಪ, ಬನ್ನಿ ಕೋಡ್ ರಮೇಶ್ ಮುಂತಾದವರಿದ್ದರು.