ಸಾರಾಂಶ
ಮಂಜುನಾಥ ಕೆ.ಎಂ.ಕನ್ನಡಪ್ರಭ ವಾರ್ತೆ ಬಳ್ಳಾರಿತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿನ ‘ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ’ ಕನ್ನಡ ಭಾಷಾ ಪ್ರೀತಿಯನ್ನು ನಿರ್ದಿಷ್ಟ ದಿನ ಅಥವಾ ತಿಂಗಳಿಗೆ ಸೀಮಿತಗೊಳಿಸಿಕೊಂಡಿಲ್ಲ. ಬದಲಿಗೆ ಕನ್ನಡ ಭಾಷಾ ಪ್ರೀತಿ, ಕರುನಾಡಿನ ಅನನ್ಯ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕೆಲಸದ ಜೊತೆಗೆ ಕರ್ನಾಟಕದ ನಾನಾ ಭಾಗಗಳಿಂದ ಬದುಕು ಕಟ್ಟಿಕೊಳ್ಳಲು ಹೈದರಾಬಾದ್‌ಗೆ ತೆರಳುವ ಕನ್ನಡಿಗರ ಬೇಕು-ಬೇಡಗಳಿಗೆ ಸ್ಪಂದಿಸುವ ಕಾಳಜಿಯ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಸಂಘದಲ್ಲಿರುವ ಯುವಕರ ತಂಡ ಹೆಚ್ಚು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕನ್ನಡಿಗರಿಗೆ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಹಾಜರಿದ್ದು ಸ್ಪಂದಿಸುತ್ತದೆ. ಇದು ಹೊರ ರಾಜ್ಯದಲ್ಲಿರುವ ಕನ್ನಡಿಗರು ನಿರಮ್ಮಳದಿಂದ ಜೀವನ ಕಟ್ಟಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ.
ಸೇವಾ ಕೈಂಕರ್ಯ:2005ರಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ, ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಮಾದರಿಯಲ್ಲಿ ಕನ್ನಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ಕನ್ನಡಿಗರು ಪಾಲ್ಗೊಂಡು ಕನ್ನಡ ತಾಯಿ ಭುವನೇಶ್ವರಿಯನ್ನು ಪೂಜಿಸಿ ಪುನೀತಗೊಳ್ಳುತ್ತಾರೆ. ವರ್ಷಕ್ಕೊಮ್ಮೆ ತೆಲಂಗಾಣ ಕನ್ನಡಿಗರ ಸಮಾವೇಶ ಆಯೋಜಿಸಿ, ತೆಲಂಗಾಣದಲ್ಲಿ ನೆಲೆಸಿರುವವರನ್ನು ಒಂದೆಡೆ ಸೇರಿಸಿ ಅವರ ಸಮಸ್ಯೆಗಳ ಕುರಿತು ಚರ್ಚಿಸುತ್ತಾರೆ. ಅಲ್ಲದೆ, ಅವರ ಸಮಸ್ಯೆ ನಿವಾರಣೆಗೆ ಬೇಕಾದ ನಿರ್ಣಯ ಕೈಗೊಂಡು ನಿರ್ದಿಷ್ಟ ಅವಧಿಯೊಳಗೆ ನಿರ್ಣಯ ಅನುಷ್ಠಾನಕ್ಕೆ ಕಾರ್ಯೋನ್ಮುಖರಾಗುತ್ತಾರೆ.ತೆಲಂಗಾಣ ರಾಜ್ಯದಲ್ಲಿದ್ದು ಕನ್ನಡಿಗರಿಗೆ ಸ್ಪಂದಿಸುವ ಹಾಗೂ ಕನ್ನಡಿಗರ ಸೇವೆಯಲ್ಲಿ ತೊಡಗಿಸಿಕೊಂಡ ಮಹನೀಯರನ್ನು ಕರೆದು, ಕನ್ನಡ ಸೇವಾರತ್ನ, ಕನ್ನಡ ಕಂಠೀರವ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಸಂಘದಿಂದ ಗೌರವಿಸಿ, ಪ್ರೋತ್ಸಾಹಿಸಲಾಗುತ್ತದೆ. ಕನ್ನಡದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿವರ್ಷ ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಿ, ಕನ್ನಡ ಕೆಲಸ ಮಾಡುವಂತೆ ಅವರನ್ನು ಪ್ರೇರೇಪಿಸಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಕೈಗೊಂಡು ಕನ್ನಡಿಗರನ್ನು ಒಂದೆಡೆ ಸೇರಿಸಲಾಗುತ್ತದೆ.ಕೋಟ್
ಕರ್ನಾಟಕ ಸರ್ಕಾರದ ಸಹಕಾರವಿಲ್ಲತೆಲಂಗಾಣ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಶ್ರಮಿಸುತ್ತಿದೆ. ಆದರೆ, ಕರ್ನಾಟಕ ಸರ್ಕಾರದಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ. ಈ ಹಿಂದೆ ರಾಜ್ಯದಲ್ಲಿ 140 ಕನ್ನಡ ಶಾಲೆಗಳಿದ್ದವು. ಅವುಗಳಲ್ಲಿ ಬಹುತೇಕ ಶಾಲೆಗಳನ್ನು ಮುಚ್ಚಲಾಗಿದೆ. 135 ಕನ್ನಡ ಶಿಕ್ಷಕರನ್ನು ಇಂಗ್ಲೀಷ್ ಶಿಕ್ಷಕರನ್ನಾಗಿ ಪರಿವರ್ತಿಸಲಾಗಿದೆ. ತೆಲಂಗಾಣ ರಾಜ್ಯದಲ್ಲಿರುವ ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳಿದ್ದಾರೆ. ಆದರೆ, ಅವರಿಗೆ ಬೇಕಾದ ಪೂರಕ ಸಹಕಾರ ದೊರೆಯುತ್ತಿಲ್ಲ. ಇಲ್ಲಿನ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದೇವೆ. ಅಲ್ಲದೆ, ಹೊರನಾಡ ಕನ್ನಡಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.5ರಷ್ಟು ಮೀಸಲು ನೀತಿ ಜಾರಿಯಾಗಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ.- ಧರ್ಮೇಂದ್ರ ಪೂಜಾರಿ, ಅಧ್ಯಕ್ಷರು, ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ, ಹೈದರಾಬಾದ್, ತೆಲಂಗಾಣ.
;Resize=(128,128))
;Resize=(128,128))
;Resize=(128,128))
;Resize=(128,128))