ಸಾರಾಂಶ
ಕೃಷ್ಣ ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಜನ್ಮ ತಳೆದ ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡದ ದೇಸಿ ಜ್ಞಾನವನ್ನು ಪಸರಿಸಲು ಪ್ರಸಾರಾಂಗವನ್ನು ಸ್ಥಾಪಿಸಿ, ಕನ್ನಡದ ಕೈಂಕರ್ಯಕ್ಕಾಗಿ 1600ಕ್ಕೂ ಅಧಿಕ ಅಧ್ಯಯನ ಗ್ರಂಥಗಳನ್ನು ಪ್ರಕಟಿಸಿದೆ.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಅಂದಿನ ಕುಲಪತಿ ಡಾ। ಚಂದ್ರಶೇಖರ ಕಂಬಾರ ಅವರ ಕಾಲದಲ್ಲೇ ಸ್ಥಾಪನೆಯಾಗಿದ್ದು, ಈಗಲೂ ಕ್ರಿಯಾಶೀಲವಾಗಿದೆ. ಕನ್ನಡ ವಿಶ್ವವಿದ್ಯಾಲಯ ಹೊರ ತಂದಿರುವ 1600ಕ್ಕೂ ಅಧಿಕ ಕೃತಿಗಳನ್ನು ಅಧ್ಯಯನ ಮಾಡುವ ಓದುಗರು, ಕರ್ನಾಟಕವಲ್ಲದೇ ಹೊರ ನಾಡು ಮತ್ತು ವಿದೇಶದಲ್ಲೂ ಇದ್ದಾರೆ. ಹಾಗಾಗಿ ಕನ್ನಡ ವಿವಿಯ ಪ್ರಸಾರಾಂಗ ಈಗಲೂ ಹೊಸತನದೊಂದಿಗೆ ಅಧ್ಯಯನ ಗ್ರಂಥಗಳನ್ನು ಪ್ರಕಟಿಸುತ್ತಾ ಸಾಗಿದೆ.ಪುಸ್ತಕದಿಂದ ಬಂದ ಲಾಭ ಮುದ್ರಣಕ್ಕೆ:
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪುಸ್ತಕದಿಂದ ಬರುವ ಆದಾಯವನ್ನು ಮತ್ತೆ ಪುಸ್ತಕದ ಮುದ್ರಣಕ್ಕೆ ಬಳಕೆ ಮಾಡುತ್ತಿದೆ. ಇದರ ಲಾಭವನ್ನು ಬೇರೆ ಕಾರ್ಯ ಯೋಜನೆಗೆ ಬಳಕೆ ಮಾಡುತ್ತಿಲ್ಲ. ಹಾಗಾಗಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಸರ್ಕಾರದ ಪರಿಮಿತ ಅನುದಾನದ ನಡುವೆಯೂ ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿದೆ. ಈ ಮೂಲಕ ಕನ್ನಡದ ಜ್ಞಾನವನ್ನು ಪಸರಿಸುತ್ತಿದೆ.ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಕನ್ನಡ ಸಾಹಿತ್ಯ ಲೋಕದ ಸಾಂಸ್ಕೃತಿಕ ಬದುಕಿನ ಬಗೆಗೆ ವಿಶ್ವವಿದ್ಯಾಲಯ ಒಳ ಹಾಗೂ ಹೊರ ವಿದ್ವಜ್ಜನರಿಂದ ಗ್ರಂಥಗಳನ್ನು ಬರೆಯಿಸಿ ಪ್ರಕಟಿಸುತ್ತ ಬಂದಿದೆ. ಭಾಷೆ, ಕಲೆ, ಸಾಹಿತ್ಯ, ವಿಜ್ಞಾನ, ಇತಿಹಾಸ, ಜಾನಪದ, ಬುಡಕಟ್ಟು ಸಂಗೀತ, ಶಾಸನ, ಮಾನವಿಕ, ಮಹಿಳೆ, ಸಮಾಜ, ವೈದ್ಯವಿಜ್ಞಾನ, ನವಸಾಕ್ಷರತೆ, ವಿಶ್ವಕೋಶ, ರಾಜ್ಯಕೋಶ ಹೀಗೆ ಹತ್ತು ಹಲವು ವೈವಿಧ್ಯಪೂರ್ಣವಾದ ವಿಷಯಗಳಿಗೆ ಸಂಬಂಧಿಸಿದ ಪ್ರಬುದ್ಧ ಕೃತಿಗಳನ್ನು ಪ್ರಕಟಿಸುವುದರ ಮೂಲಕ ಹಲವು ಜ್ಞಾನಶಾಖೆಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ. ಪ್ರಸಾರಾಂಗ ತನ್ನ ಪ್ರಕಟಣೆಗಳನ್ನು ರಾಜ್ಯದ ಮೂಲೆ ಮೂಲೆಗೂ ದಾಖಲೆಯ ಪ್ರಸಾರ ಹಾಗೂ ಮಾರಾಟ ಮಾಡಿದೆ.
ಅನನ್ಯವಾದ ಗ್ರಂಥಗಳನ್ನು ಪ್ರಕಟಿಸುವುದರ ಮೂಲಕ ಸ್ಥಾಪಿತ ಗುರಿಯನ್ನು ಮುಟ್ಟಿದೆ. ಅಂತೆಯೇ ಪ್ರಸಾರಾಂಗ ಪ್ರಕಟಿಸಿರುವ ಪ್ರಕಟಣೆಗಳಿಗೆ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೊಡ ಮಾಡುವ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಗ್ರಂಥಗಳ ಜೊತೆಗೆ ಮಾಹಿತಿಯುಗವಾದ ಇಂದಿನ ಜಾಗತಿಕರಣಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ವಿವಿಧ ಜ್ಞಾನಶಾಖೆಗಳ ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ. ನಾಡಿನ ಬೇರೆ ಬೇರೆ ಭಾಗಗಳಿಂದ ವಿಷಯ ತಜ್ಞರಿಂದ ಉಪನ್ಯಾಸಗಳನ್ನು ಆಯೋಜಿಸಿ, ಅವುಗಳನ್ನು ಮಂಟಪಮಾಲೆ ಎನ್ನುವ ಹೆಸರಿನಲ್ಲಿ ಮುದ್ರಿಸಿ ಕಡಿಮೆ ದರದಲ್ಲಿ ಓದುಗರಿಗೆ ಮುಟ್ಟಿಸುವ ಕೆಲಸವನ್ನು ನಿರ್ವಹಿಸುತ್ತಿದೆ.ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಶ್ವಕೋಶಗಳಂತಹ ಆಕರ ಗ್ರಂಥಗಳನ್ನು ಪ್ರಕಟಿಸಿದೆ. ಕರ್ನಾಟಕ ಚರಿತ್ರೆ ಸಂಪುಟಗಳನ್ನು ಬುಡಕಟ್ಟು ಮತ್ತು ಜನಪದ ಮೌಖಿಕ ಮಹಾಕಾವ್ಯಗಳನ್ನು ಪ್ರಕಟಿಸಿದೆ. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಸರಣಿಯಡಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಕರ್ನಾಟಕದ ಹೊರಗಿನ ಕನ್ನಡ ಶಾಸನ ಸಂಪುಟಗಳನ್ನು, ಜಿಲ್ಲಾವಾರು ದೇವಾಲಯ ಕೋಶಗಳನ್ನು, ಚರಿತ್ರೆ ಸಂಪುಟಗಳನ್ನು ಕರ್ನಾಟಕ ಚಳುವಳಿ ಕುರಿತ ಕೃತಿಗಳನ್ನು ಪ್ರಕಟಿಸಿದೆ. ಪ್ರಾದೇಶಿಕ ಕಿರು ಸಂಸ್ಥಾನಗಳ ಬಗೆಗಿನ ಸಂಪಾದನಾ ಕೃತಿಗಳು, ಸಮಕಾಲೀನ ಸ್ಪಂದನೆಗೆ ಪೂರಕವಾದ ಯೋಜನೆಗಳನ್ನು ಕೈಗೊಂಡು ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದೆ. ಶಾಲಾ, ಕಾಲೇಜು ಶಿಕ್ಷಣಕ್ಕಾಗಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು, ವೃತ್ತಿಪರ ಶಿಕ್ಷಣದ ಕನ್ನಡೇತರರಿಗೆ ಪಠ್ಯಪುಸ್ತಕಗಳನ್ನು ಮತ್ತು ನವಸಾಕ್ಷರ ಪುಸ್ತಕ ಮಾಲೆಯನ್ನು ಪ್ರಕಟಿಸಿದೆ.
ವಿಶ್ವಪಾರಂಪರಿಕ ತಾಣವಾದ ಹಂಪಿ ಪರಿಸರಕ್ಕೆ ಸಂಬಂಧಿಸಿದಂತೆ ಚರಿತ್ರೆ, ಪುರಾತತ್ವ, ಶಾಸನ, ಜಾನಪದ ಮತ್ತು ವಿದೇಶಿ ಪ್ರವಾಸಿಗರ ಬರಹಗಳ ಕುರಿತು ಕೃತಿಗಳನ್ನು ಪ್ರಕಟಿಸಿದೆ. ಕನ್ನಡ ಶಾಸ್ತ್ರೀಯ ಭಾಷಾ ಯೋಜನೆಯಡಿ ವಿವಿಧ ಅಧ್ಯಯನ ವಿಭಾಗಗಳಿಂದ 19 ಕೃತಿಗಳು ಪ್ರಕಟವಾಗಿವೆ. ಕನ್ನಡ ವಿಶ್ವವಿದ್ಯಾಲಯ ಪ್ರತಿವರ್ಷ ಕೊಡ ಮಾಡುವ ಪ್ರತಿಷ್ಠಿತ `ನಾಡೋಜ’ ಗೌರವಕ್ಕೆ ಭಾಜನರಾದವರ ಕುರಿತು ಕೃತಿಗಳನ್ನು ಪ್ರಕಟಿಸಿದೆ.ಕನ್ನಡಕ್ಕಾಗಿ ಅಹರ್ನಿಶಿ ದುಡಿಮೆ
ಸರ್ಕಾರದ ಪರಿಮಿತ ಅನುದಾನದ ನಡುವೆಯೂ ಕನ್ನಡದ ದೇಸಿ ಜ್ಞಾನ ಪ್ರಸರಣಕ್ಕಾಗಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ವಿವಿಧ ಅಧ್ಯಯನ ಕೃತಿಗಳನ್ನು ಹೊರ ತಂದಿದೆ. ದೇಸಿ ಸಂಸ್ಕೃತಿ, ಶೋಧನೆ, ಪ್ರಚಾರಕ್ಕಾಗಿ ಕನ್ನಡ ವಿಶ್ವವಿದ್ಯಾಲಯವು ಅಹರ್ನಿಶಿ ದುಡಿಯುತ್ತಿದೆ.-ಡಾ। ಪರಮಶಿವಮೂರ್ತಿ, ಕುಲಪತಿ ಹಂಪಿ ಕನ್ನಡ ವಿವಿ
;Resize=(128,128))
;Resize=(128,128))
;Resize=(128,128))